ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಇಂದಿರಾನಗರದ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಇಬ್ಬರು ಬಾಲಕಿಯರು ಚಿಂದಿ ಆಯುವ ವೇಳೆ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದು ಮೃತ ದೇಹಗಳನ್ನು ಕೆರೆಯಲ್ಲಿ ಎಸೆಯಲಾಗಿದೆ ಎನ್ನಲಾದ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಲಬುರಗಿಯಲ್ಲಿ ಡಿವೈಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿತು.
ಈ ಸಂಬಂಧ ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼ19 ವರ್ಷದ ಯುವತಿ ಹಾಗೂ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೆರೆಯಲ್ಲಿ ಎಸೆದು ಹೋಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದಿರುವುದು ಖಂಡನಾರ್ಹ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ʼಅಲೆಮಾರಿ ಸಮುದಾಯದವರಿಗೆ ಉಚಿತವಾಗಿ ವಸತಿ, ಶಿಕ್ಷಣ ಹಾಗೂ ಉದ್ಯೋಗದ ಭದ್ರತೆ ದೊರಕಿಸಬೇಕು. ಸಮಾಜದಲ್ಲಿ ಯಾವುದೇ ಭದ್ರತೆಯಿಲ್ಲದೇ ಜೀವನ ನಡೆಸುತ್ತಿರುವ ಈ ಅಲೆಮಾರಿ ಸಮುದಾಯದ ಹೆಣ್ಣುಮಕ್ಕಳ ಅನುಮಾನಾಸ್ಪದ ಸಾವಿನ ಪ್ರಕರಣದ ಸೂಕ್ತ ತನಿಖೆಯನ್ನು ಕೈಗೊಂಡು ಮೃತ ಯುವತಿಯರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ರಾಜಕೀಯ ಒತ್ತಡಕ್ಕೆ ಒಳಗಾಗಿ ಪ್ರಕರಣ ಮುಚ್ಚಿಹಾಕದೇ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | 15 ತಿಂಗಳಾದರೂ ಪದವೀಧರ ಶಿಕ್ಷಕರಿಗಿಲ್ಲ ನಾಲ್ಕು ತಿಂಗಳ ಪಗಾರ!
ಡಿವೈಎಫ್‌ಐ ರಾಜ್ಯ ಘಟಕ ಅಧ್ಯಕ್ಷೆ ಲವಿತ್ರ ವಸ್ತ್ರದ್ ಸೇರಿದಂತೆ ಸಂಘಟನೆಯ ಪ್ರಮುಖರಾದ ಸಲ್ಮಾನ್ ಖಾನ್, ದಿಲ್‌ಶಾದ್, ಪ್ರಿಯಾಂಕ್ ಮಾವಿನಕರ್, ಸುಜಾತಾ ವೈ ಹಾಗೂ ಮತ್ತಿತರರು ಇದ್ದರು.