ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿ ತಮಿಳು ನಟಿ, ರಾಜಕಾರಣಿ ರಂಜನಾ ನಾಚಿಯಾರ್ ಮಂಗಳವಾರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆಯಲ್ಲಿ ರಂಜನಾ ಅವರು, “ತ್ರಿಭಾಷಾ ನೀತಿ ಹೇರಿಕೆ ತಪ್ಪು” ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದಿದ್ದರೆ ಸಮಗ್ರ ಶಿಕ್ಷ ಮಿಷನ್‌ಗೆ 2,400 ರೂಪಾಯಿ ನಿಧಿಯನ್ನು ನೀಡುವುದಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಬೆದರಿಕೆ ಹಾಕಿದ್ದರು. ಕೇಂದ್ರ ಸಚಿವರ ಈ ಬೆದರಿಕೆಗೆ ತಮಿಳುನಾಡು ನಾಯಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
“ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ” ಎಂದು ಉದಯನಿಧಿ ಸ್ಟ್ಯಾಲಿನ್ ಘೋಷಿಸಿದ್ದಾರೆ. ಹಾಗೆಯೇ “ಹಿಂದಿಯನ್ನು ಒಪ್ಪಿಕೊಳ್ಳುವ ರಾಜ್ಯಗಳು ತಮ್ಮ ಮಾತೃಭಾಷೆಯನ್ನು ಕಳೆದುಕೊಳ್ಳಲಿದೆ” ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದರ ವಿರುದ್ಧವಾಗಿ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ವಾಗ್ವಾದ ನಡೆಯುತ್ತಲೇ ಇದೆ. ಈ ನಡುವೆ ರಂಜನಾ ಬಿಜೆಪಿ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
🙏@BJP4TamilNadu @annamalai_k @KesavaVinayakan @blsanthosh pic.twitter.com/rkFMplsjA2
— Ranjana Natchiyaar (@RanjanaNachiyar) February 25, 2025
ಇವೆಲ್ಲವುದರ ನಡುವೆ ಚುನಾವಣೆಗೂ ಮುನ್ನ ಭಾಷೆ ವಿಚಾರವನ್ನು ಆಡಳಿತಾರೂಢ ಡಿಎಂಕೆ ಸರ್ಕಾರವು ರಾಜಕೀಯಕರಣಗೊಳಿಸುತ್ತಿದೆ ಎಂದು ಎಐಎಡಿಎಂಕೆ ಸಂಸದ ಎಂ ಥಂಬಿದುರೈ ದೂರಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಎಐಎಡಿಎಂಕೆ ಸಂಸದ, “ರಾಜ್ಯ ಸರ್ಕಾರವು ಹಲವು ಭಾಷೆಗಳನ್ನು ಕಲಿಸುವ ಸಿಬಿಎಸ್‌ಇ ಶಾಲೆಗಳಿಗೆ ಅವಕಾಶ ನೀಡುತ್ತದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು, ಹಿಂದಿ ಹೇರಿಕೆಯನ್ನು ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ದಿವಸ | ಭಾಷಾ ಹೇರಿಕೆ ವಿರುದ್ಧ ಇಂದು ಪ್ರತಿಭಟನೆ: ‘ಕರಾಳ ದಿನ’ ಆಚರಣೆಗೆ ಕರವೇ ಕರೆ
ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿಗೆ ಹಲವು ರಾಜಕೀಯ ಪಕ್ಷಗಳು, ರಾಜ್ಯಗಳು ವಿರೋಧ ವ್ಯಕ್ತಪಡಿಸಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಸರೀಕರಣದ ಯತ್ನ ಮತ್ತು ಹಿಂದಿ ಹೇರಿಕೆ ಮಾಡುವುದನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಸ್ಥಳೀಯ ಭಾಷೆಗಳನ್ನು ನಿಧಾನವಾಗಿ ನಾಶಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರವನ್ನು ವಿರೋಧಿಸುತ್ತಾ ಬಂದಿದೆ. ಇತರೆ ಭಾಷೆಗಳನ್ನು ಕಲಿಯಬಾರದು ಎಂಬ ವಾದವನ್ನು ಯಾವ ರಾಜ್ಯಗಳೂ ಮಾಡಿಲ್ಲ. ಬದಲಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂಬಂತೆ ಬಿಂಬಿಸಿ ಹೇರಿಕೆ ಮಾಡುವುದನ್ನು ವಿರೋಧಿಸಿದೆ. ನಮ್ಮ ದೇಶದಲ್ಲಿ ಸಂಸ್ಕೃತಿ, ಭಾಷೆ, ಆಚರಣೆ ಎಲ್ಲವೂ ವೈವಿಧ್ಯವಾಗಿದ್ದು ಇದ್ಯಾವುದನ್ನು ಕೂಡಾ ನಾಶ ಮಾಡಬಾರದು ಎಂಬುದು ಸ್ಥಳೀಯ ಭಾಷಿಕರ ವಾದವಾಗಿದೆ.
