ಅವಳಿ ಜಿಲ್ಲೆಯ ರೈತರನ್ನು ಬಲಿಕೊಟ್ಟು ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆ ಜುರಾಲಾ ಆಣೆಕಟ್ಟಿಗೆ ರಾತ್ರೋ ರಾತ್ರಿ 1.27 ಟಿಎಂಸಿ ನೀರು ಹರಿ ಬಿಡುವ ಮೂಲಕ ಜಿಲ್ಲೆಯ ರೈತರ ಬದುಕನ್ನು ನಾಶ ಮಾಡಲು ಹೊರಟಿದೆ. ಜಿಲ್ಲೆಯಲ್ಲಿ ನಮಗೇ ಕುಡಿಯಲು ನೀರು ಇಲ್ಲದ ಸಂದರ್ಭದಲ್ಲಿ ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ಸಮಂಜಸವಲ್ಲ. ತೆಲಂಗಾಣ ಸರ್ಕಾರ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಾಗಲೇ ಅಖಂಡ ಕರ್ನಾಟಕ ರೈತ ಸಂಘ ಚಳವಳಿ ಮಾಡಿ ನೀರು ಬಿಡದಿರಲು ವಿರೋಧ ವ್ಯಕ್ತಪಡಿಸಿತ್ತು” ಎಂದರು.
“ಆದರೂ ಹೋರಾಟವನ್ನು ಲೆಕ್ಕಿಸದೇ ನೀರು ಹರಿಸಲಾಗುತ್ತಿದೆ. ಆಲಮಟ್ಟಿ ಅಣೆಕಟ್ಟಿನ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ನ್ಯಾ ಪ್ರಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣ ತೀರ್ಪು ನೀಡಿದಾಗ ಇದೆ ತೆಲಂಗಾಣ ಸರ್ಕಾರ ನ್ಯಾಯ ಮಂಡಳಿಯ ವಿರುದ್ಧ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆ ಸಂದರ್ಭದಲ್ಲಿ ಆಲಮಟ್ಟಿ ಅಣೆಕಟ್ಟಿನ ಬಗ್ಗೆ ವಿರೋಧ ವ್ಯಕ್ತಪಡಿಸಿದಂತವರು ಈಗ ನೀರಿಗಾಗಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯ ನೆನಪಾಗುತ್ತದೆ” ಎಂದು ಆಕ್ರೋಶ ಹೊರಹಾಕಿದರು.
“ಸಚಿವ ಶಿವಾನಂದ ಪಾಟೀಲ ನೀರು ಹರಿಸಿದ್ದನ್ನು ಸಮರ್ಥನೆ ಮಾಡಿಕೊಂಡು ತೆಲಂಗಾಣ ರಾಜ್ಯದ ರೈತರಿಗೆ ಮಾನವೀಯತೆಯ ದೃಷ್ಟಿಯಿಂದ ನೀರು ಹರಿಸಲಾಗುತ್ತಿದೆ ಎಂದು ಮಾನವೀಯತೆಯ ಲೇಪನ ಕೊಟ್ಟಿದ್ದಾರೆ. ಹಾಗಿದ್ದರೆ ವಿಜಯಪುರ ಜಿಲ್ಲೆಯ ರೈತರ ವಿಷಯದಲ್ಲಿ ಮಾನವೀಯತೆ ಇಲ್ಲವೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತವಾರಿ ಸಚಿವರು ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ನನಗೆ ಗೊತ್ತಿಲ್ಲವೆಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯದಲ್ಲಿ ಸದ್ಯ ಒಟ್ಟು 51.552 ಟಿಎಂಸಿ ನೀರಿನ ಸಂಗ್ರಹವಿದ್ದು, ಅದರಲ್ಲಿ 17 ಟಿಎಂಸಿ ಬಳಕೆಯ ನಿರ್ಭಂದದ ನೀರನ್ನು ಹೊರತು ಪಡೆಸಿ ಕೇವಲ 33.932 ಟಿಎಂಸಿ ನೀರಿದ್ದು ಅದರಲ್ಲಿ ಕೈಗಾರಿಕೆಗಾಗಿ ಅಂದರೆ ಜಿಂದಾಲಕ್ಕೆ, ಎನ್.ಟಿ.ಪಿ.ಸಿ. ಹಾಗೂ ಜಲಚರ ಮತ್ತು ಜಾನುವಾರಗಳಿಗೆ ಕುಡಿಯಲು ನೀರು ಕಾಯ್ದಿರಿಸಬೇಕಾಗುತ್ತದೆ. ಇದರಲ್ಲಿ ತೆಲಂಗಾಣಕ್ಕೆ ನೀರು ಕೊಟ್ಟರೆ ಕೊನೆಯಲ್ಲಿ ಉಳಿಯುವುದು ನಮ್ಮ ಜಿಲ್ಲೆಗೆ 1 ಟಿಎಂಸಿ ಮಾತ್ರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜುರಾಲಾ ಅಣೆಕಟ್ಟಿಗೆ ನೀರು ಹರಿಸುತ್ತಿರುವದು ಸರ್ಕಾರ ಸಂಪೂರ್ಣ ಮಾನವೀಯತೆ ಮರೆತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸದ್ಯ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಪಕ್ಷದ ಹಿತ ಕಾಪಾಡಲು ಮುಂದಿನ ಚುಣಾವಣೆಯ ದೃಷ್ಟಿಕೋನ ಇಟ್ಟುಕೊಂಡು ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಮಾನವೀಯತೆ ಇಟ್ಟುಕೊಂಡು ತಕ್ಷಣ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಕೆ.ಬಿ.ಜೆ. ಎನ್. ಎಲ್ ಕಚೇರಿಗೆ ಬೀಗ ಹಾಕಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ರಾಜ್ಯ ಸರ್ಕಾರಕ್ಕೆ ಕುಲಕರ್ಣಿ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದ ವಿಜಯಪುರದ ಇಬ್ಬರ ಸಾವು
ಈ ವೇಳೆ ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಉಮೇಶ ವಾಲಿಕಾರ, ವಿಶ್ವಲ ಜರಾದಾರ, ತಾಳಿಕೋಟೆ ತಾಲೂಕು ಅಧ್ಯಕ್ಷ ಬಾಲಗೌಡ ಅಂಗದಳ್ಳಿ, ಹಣಮಂತ್ರಾಯ ಗುಣಕಿ, ಲ್ಯಾವಪ್ಪಗೌಡ ಪೋಲೇಶಿ, ಸಂತೋಶ ಬಿರಾದಾರ, ಮೋಹನಗೌಡ ಪಾಟೀಲ, ಶಿವಣ್ಣ ಲಗಳ, ಚೋಳಪ್ಪ ಜಮಖಂಡಿ, ಅಣ್ಣಾರಾಯ ಶಿವಯೋಗಿ, ನಾಲು ತಾಳಿಕೋ ಬಸನಗೌಡ ಪಾಟೀಲ, ಮಲ್ಲನಗೌಡ ನಾಡಗೌಡ, ಮಲ್ಲು ಗುಂಡಾನವರ, ಮುದಕ್ಕಪ್ಪ ಬಿಂಜಲಬಾವಿ ಇದ್ದರು.
