ಕೇಂದ್ರ ಸರ್ಕಾರ ತ್ರಿಭಾಷಾ ನೀತಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದಂತೆ ದೇಶದಲ್ಲ ಭಾಷಾ ಸಮರ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ಹಿಂದಿ ಹೇರಿಕೆ ವಿಚಾರದಲ್ಲಿ ತೀವ್ರ ವಾಕ್ಸಮರ ಏರ್ಪಟ್ಟಿದೆ. ಈ ನಡುವೆ ತಮಿಳುನಾಡು ಮೂಲದವರೇ ಆದ ಝೋಹೋ ಸ್ಥಾಪಕ ಶ್ರೀಧರ್ ವೆಂಬು, “ಹಿಂದಿ ತಿಳಿಯದಿರುವುದು ಗಂಭೀರ ದೌರ್ಬಲ್ಯ” ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೆಂಬು, “ಝೋಹೋ ದೇಶದಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಹೀಗಿರುವಾಗ ತಮಿಳುನಾಡಿನ ಗ್ರಾಮೀಣ ಇಂಜಿನಿಯರ್‌ಗಳು ಮುಂಬೈ ಮತ್ತು ದೆಹಲಿಯ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ನಮ್ಮ ವ್ಯಾಪಾರ ಹೆಚ್ಚಾಗಿ ಈ ಎರಡು ನಗರಗಳಲ್ಲಿ ಮತ್ತು ಗುಜರಾತ್‌ನಲ್ಲಿದೆ. ತಮಿಳುನಾಡಿನ ಉದ್ಯೋಗಿಗಳು ಇತರೆ ರಾಜ್ಯದ ಗ್ರಾಹಕರಿಗೆ ಸೇವೆ ನೀಡುತ್ತಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್ ವಿಜಯ್‌ರ ಟಿವಿಕೆ ಸೇರ್ಪಡೆ
“ಹೀಗಿರುವಾಗ ತಮಿಳುನಾಡಿನಲ್ಲಿ ನಮಗೆ ಹಿಂದಿ ತಿಳಿಯದಿರುವುದು ಗಂಭೀರ ದೌರ್ಬಲ್ಯವಾಗಿದೆ. ಹಿಂದಿಯನ್ನು ಕಲಿಯುವುದು ಒಳ್ಳೆಯದು. ಕಳೆದ ಐದು ವರ್ಷಗಳಲ್ಲಿ ನಾನು ನಿಧಾನವಾಗಿ ಹಿಂದಿ ಓದುವುದನ್ನು ಕಲಿತಿದ್ದೇನೆ. ಈಗ ನಾನು ಶೇಕಡ 20ರಷ್ಟು ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ” ಎಂದೂ ವೆಂಬು ತಿಳಿಸಿದ್ದಾರೆ.
“ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದರಿಂದ ತಮಿಳುನಾಡಿನ ಇಂಜಿನಿಯರ್‌ಗಳು ಮತ್ತು ಉದ್ಯಮಿಗಳು ಹಿಂದಿ ಕಲಿಯುವುದು ಉತ್ತಮ. ರಾಜಕೀಯವನ್ನು ಕಡೆಗಣಿಸಿ, ನಾವು ಭಾಷೆ ಕಲಿಯೋಣ” ಎಂದಿದ್ದಾರೆ. ಜೊತೆಗೆ ತಮಿಳು ಮತ್ತು ಹಿಂದಿ ಲಿಪಿಯಲ್ಲಿ, “ಹಿಂದಿ ಕಲಿಯೋಣ” ಎಂದು ಬರೆದುಕೊಂಡಿದ್ದಾರೆ.
As Zoho grows rapidly in India, we have rural engineers in Tamil Nadu working closely with customers in Mumbai and Delhi – so much of our business is driven form these cities and from Gujarat. Rural jobs in Tamil Nadu depend on us serving those customers well.
— Sridhar Vembu (@svembu) February 25, 2025
Not knowing Hindi…
ಕೇಂದ್ರ ಸರ್ಕಾರವು ತ್ರಿಭಾಷಾ ನೀತಿ ಹೇರಿಕೆ ಮೂಲಕ ದೇಶದಾದ್ಯಂತ ಹಿಂದಿ ಹೇರಿಕೆಗೆ ಮುಂದಾಗಿದೆ. ಇದನ್ನು ತಮಿಳುನಾಡು ಸರ್ಕಾರ ತೀವ್ರವಾಗಿ ಖಂಡಿಸಿದೆ. ಆದರೆ ಕೇಂದ್ರ ಶಿಕ್ಷಣ ಸಚಿವ ತಮಿಳುನಾಡಿಗೆ ದೊರೆಯಬೇಕಾದ ನಿಧಿ ಬಿಡುಗಡೆ ಮಾಡಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಮಿಳುನಾಡಿನಲ್ಲಿ ಜಾರಿ ಮಾಡಬೇಕು ಎಂಬ ಬೆದರಿಕೆಯನ್ನು ಹಾಕಿದ್ದಾರೆ. ಇದಾದ ಬಳಿಕ ತಮಿಳುನಾಡು “ಭಾಷಾ ಸಮರಕ್ಕೆ ನಾವು ಸಿದ್ಧ” ಎಂದು ಘೋಷಿಸಿಕೊಂಡಿದ್ದು, ವಾಕ್ಸಮರ ನಡೆಯುತ್ತಲೇ ಇದೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ ವಿವಾದ | ಶಾಲೆಗಳಲ್ಲಿ ತೆಲುಗು ಬೋಧನೆ, ಕಲಿಕೆ ಕಡ್ಡಾಯಗೊಳಿಸಿದ ತೆಲಂಗಾಣ
ಇವೆಲ್ಲವುದರ ನಡುವೆ ಈ ಹಿಂದೆ ಕನ್ನಡ ಕಲಿಯುವುದರ ಪರವಾಗಿ ಮಾತನಾಡಿದ ತಮಿಳಿಗ ಶ್ರೀಧರ್ ವೆಂಬು ಈಗ ಹಿಂದಿ ಕಲಿಕೆ ಪರವಾಗಿ ಮಾತನಾಡಿದ್ದಾರೆ. ಕಳೆದ ವರ್ಷ ಹಿಂದಿ ರಾಷ್ಟ್ರೀಯ ಭಾಷೆ ಎಂಬ ಟೀಶರ್ಟ್‌ಗಳ ಮಾರಾಟ ವಿಚಾರದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ವೆಂಬು, “ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಕನ್ನಡ ಕಲಿಯಲೇಬೇಕು” ಎಂದು ಹೇಳಿದ್ದರು. ಹೀಗಿರುವಾಗ ವೆಂಬು ಅವರ ಹಿಂದಿ ಕುರಿತಾದ ಇತ್ತೀಚಿನ ಎಕ್ಸ್ ಪೋಸ್ಟ್‌ಗೆ ಕೆಲವು ನೆಟ್ಟಿಗರು ಇದು ಉದ್ಯಮಿಯೊಬ್ಬ ತನ್ನ ಉದ್ಯಮ ವಿಸ್ತರಿಸಲು ರೂಪಿಸುವ ಯೋಜನೆ ಎಂದಿದ್ದಾರೆ.
ಇನ್ನು ವೆಂಬು ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, “ಹಿಂದಿ ತಿಳಿಯದಿರುವುದು ತಮಿಳುನಾಡಿಗೆ ಗಂಭೀರ ದೌರ್ಬಲ್ಯ… ಇದು ಸುಳ್ಳು. ಇದು ಸತ್ಯವಾಗಿದ್ದರೆ, ತಮಿಳುನಾಡು ದೇಶದ ಕೈಗಾರಿಕರಣಗೊಂಡ, ಅಭಿವೃದ್ಧಿಯಾದ ರಾಜ್ಯಗಳಲ್ಲಿ ಒಂದಾಗಿರುತ್ತಿರಲಿಲ್ಲ. ಐಟಿ ದೈತ್ಯಗಳು, ಆಟೋಮೊಬೈಲ್ ಸಂಸ್ಥೆಗಳು ಮತ್ತು ಸಾಫ್ಟ್‌ವೇರ್ ಸಂಸ್ಥೆಗಳು ತಮಿಳುನಾಡಿನಲ್ಲಿ ಹಿಂದಿಯಿಲ್ಲದೆಯೇ ಬೆಳೆದಿದೆ. ಹಲವು ದಶಕಗಳಿಂದ ಇಂಗ್ಲೀಷ್ ಸಹಾಯ ಮಾಡಿದೆ. ಹಿಂದಿ ಅತೀ ಅಗತ್ಯವಾಗಿದ್ದರೆ, ತಮಿಳುನಾಡು ಆರ್ಥಿಕತೆ ವೇಗವಾಗಿ ಬೆಳೆಯುತ್ತಿರಲಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಇನ್ನು ಕೆಲವು ನೆಟ್ಟಿಗರು ವೆಂಬು ಹೇಳಿಕೆಗೆ ಸಮ್ಮತ ವ್ಯಕ್ತಪಡಿಸಿದ್ದಾರೆ.
ಇವೆಲ್ಲವುದರ ನಡುವೆ ನೆಟ್ಟಿಗರೊಬ್ಬರು, “ಹಿಂದಿ ಕಲಿಯುವ ಅಗತ್ಯವಿರುವವರು ಹಿಂದಿ ಕಲಿಯಲಿ. ಅಗತ್ಯವಿಲ್ಲದಿದ್ದರೆ ಹೇರಿಕೆ ಬೇಡ. ಯಾವುದೇ ಭಾಷೆಯನ್ನು ಹೇರಿಕೆ ಮಾಡಬಾರದು. ಹಾಗೆಯೇ ನಾವು ನೆಲೆಸಿರುವ ಪ್ರದೇಶದ ಭಾಷೆಯನ್ನು ಕಲಿಯುವುದು ಕೂಡಾ ಅತೀ ಮುಖ್ಯ. ಸದ್ಯ ಭಾಷೆ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
