ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಪ್ರತಿ ದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳು ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರ ಇದೀಗ ರಾಜ್ಯದಲ್ಲೂ ಹರಡಿರುವ ಶಂಕೆ ವ್ಯಕ್ತವಾಗಿದೆ.
ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ ಎಂಟತ್ತು ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಾನ್ವಿ ಪಟ್ಟಣ ಹಾಗೂ ರಬಣಕಲ್ ಗ್ರಾಮ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಮರಣ ಹೊಂದಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪಶುವೈದ್ಯಾಧಿಕಾರಿಗಳು, ಮರದಿಂದ ಬಿದ್ದ ಕೆಲವು ಪಕ್ಷಿಗಳಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಐಎಚ್‌ವಿಎ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾನ್ವಿ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ, ಪಕ್ಷಿಗಳ ಸಾವಿಗೆ ಹಲವು ಕಾರಣಗಳಿರಬಹುದು. ಈಗಲೇ ಖಚಿತ ಮಾಹಿತಿ ಹೇಳಲು ಆಗಲ್ಲ. ಪ್ರಯೋಗಾಲಯದ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ” ಎಂದು ಹೇಳಿದರು.
ಇದನ್ನೂ ಓದಿ: ರಾಯಚೂರು | ಶೋಷಣೆ ಮುಕ್ತ ಸಮಾಜ ಕಟ್ಟುವುದು ಸ್ವಾತಂತ್ರ್ಯ ಪಡೆಯುವಷ್ಟೇ ಮುಖ್ಯ: ಚನ್ನಬಸವ
“ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಕ್ಕಿಜ್ವರ ಹಿನ್ನಲೆ ಕೋಳಿ ಸಾಕಣೆ ನಿರ್ಬಂಧಿಸಲಾಗಿದೆ. ಆದರೆ ಕರ್ನಾಟಕ ಪಶು ಇಲಾಖೆ ರಾಜ್ಯ ಮಟ್ಟದಲ್ಲಿ ಯಾವುದೇ ಸೂಚನೆ ನೀಡದೇ ಇರುವುದರಿಂದ ನಮ್ಮ ರಾಜ್ಯದಲ್ಲಿ ನಿರ್ಬಂಧಿಸುವ ಕೆಲಸ ಮಾಡುತ್ತಿಲ್ಲ” ಎಂದು ಹೇಳಿದರು.
