ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಎಳನೀರಿಗೆ ಅಭಾವ ಎದುರಾಗಿದೆ. ಎಳನೀರಿನ ಬೆಲೆ ಗಗನ ಮುಖಿಯಾಗಿದೆ.
ತುಮಕೂರು ಜಿಲ್ಲೆಯಲ್ಲಿ ಹೇರಳವಾಗಿ ತೆಂಗು ಬೆಳೆಯಲಾಗುತ್ತದೆ. ಆದರೂ ಒಂದು ಎಳನೀರಿಗೆ ಬರೋಬ್ಬರಿ ₹60 ರಿಂದ ₹70ಕ್ಕೆ ಮಾರಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಇದೀಗ ತೆಂಗು ಬೆಳೆಯುವ ನಾಡಿನಲ್ಲಿ ಎಳನೀರಿಗೆ ಅಭಾವ ಎದುರಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಎಳನೀರಿನ ದರ ಗಗನಕ್ಕೇರಿದೆ.
ತುಮಕೂರು ಜಿಲ್ಲೆಯಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ ಹಾಗೂ ತುಮಕೂರು ತಾಲೂಕಿನಲ್ಲಿ ಯಥೇಚ್ಛವಾಗಿ ತೆಂಗು ಬೆಳೆಯಲಾಗುತ್ತದೆ. ಮೊದಲು ಜಿಲ್ಲೆಯಲ್ಲಿ ₹20ರಿಂದ ₹30ಕ್ಕೆ ಸಿಗುತ್ತಿದ್ದ ಒಂದು ಎಳನೀರು ಇದೀಗ ಬರೋಬ್ಬರಿ 60-70 ರೂಪಾಯಿಗೆ ಏರಿಕೆಯಾಗಿದೆ.
ತುಮಕೂರಿನಲ್ಲಿ ಎಳನೀರು ಹುಡುಕಿದರೂ ಸಿಗುತ್ತಿಲ್ಲ. ಅಲ್ಲೋ, ಇಲ್ಲೋ ಒಂದೆರಡು ಕಡೆ ಎಳನೀರು ಸಿಕ್ಕರೂ ಬೆಲೆ ದುಬಾರಿಯಾಗಿದೆ. ಸದ್ಯ ಬಿಸಿಲ ಝಳ ಹೆಚ್ಚುತ್ತಿರುವ ಹಿನ್ನೆಲೆ ಆಸ್ಪತ್ರೆ ಸಮೀಪ ರಾಶಿ ರಾಶಿಯಾಗಿ ಇರುತಿದ್ದ ಎಳನೀರು ಇದೀಗ ಹುಡುಕಿದರೂ ರೋಗಿಗಳಿಗೂ ಸಿಗುತ್ತಿಲ್ಲ. ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರು. ಆದ್ರೆ ತುಮಕೂರಿನಲ್ಲಿಯೇ ಸದ್ಯ ಎಳನೀರಿಗೆ ಅಭಾವ ಸೃಷ್ಠಿಯಾಗಿದೆ. ಇದಕ್ಕೆಲ್ಲ ಕಾರಣ ಒಂದು ಕಡೆ ತೆಂಗಿನ ಕಾಯಿಗೆ ಬೆಲೆ ಬಂದಿರುವುದರಿಂದ ಎಳನೀರು ಕೊಯ್ಯಲು ರೈತರು ಹಿಂದೇಟು ಹಾಕುತ್ತಿರುವುದು ಎನ್ನಲಾಗಿದೆ. ಮತ್ತೊಂದೆಡೆ ರೈತರು ತೆಂಗು ಬದಲಿಗೆ ಅಡಿಕೆ ಬೆಳೆಯತ್ತ ಮುಖ ಮಾಡುತ್ತಿರುವ ಹಿನ್ನೆಲೆ, ನಿಧಾನವಾಗಿ ತೆಂಗಿನ ಬೆಳೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಜನರು.
ಇನ್ನು ಜಿಲ್ಲೆಯಲ್ಲಿ ಗಗನಕ್ಕೆರುತ್ತಿರುವ ಎಳನೀರಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಯ ಮುಖಂಡರು ತಲೆಯ ಮೇಲೆ ಎಳನೀರು ಹೊತ್ತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಎಳನೀರು ಸಿಗುವಂತೆ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದ್ದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಎಳನೀರನ್ನು 60 ರಿಂದ 70 ರೂಪಾಯಿಗೆ ಮಾರಲಾಗುತ್ತಿದೆ. ಅದರೆ ರೈತರಿಗೆ ಇದರ ಲಾಭ ದೊರೆಯುತ್ತಿಲ್ಲ. ಹಾಗಾಗಿ ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಬೇಕು ಎಂದು ರೈತ ಸಂಘದ ಬಸ್ತಿಕಟ್ಟೆ ರಾಜಣ್ಣ ಒತ್ತಾಯಿಸಿದ್ದಾರೆ.
ಮರಕ್ಕೆ ಹತ್ತಿ ಎಳನೀರು ಕೊಯ್ಯಲು ಜನ ಸಿಗುತ್ತಿಲ್ಲ. ಪ್ರಸ್ತುತ ಎಳನೀರಿನ ಸೀಜ಼ನ್ ಮುಗಿದಿರುವುದರಿಂದ ಎಳನೀರು ಮಾರುಕಟ್ಟೆಗೆ ಬರುತ್ತಿಲ್ಲ. ಹಾಗೆ ಕಳೆದ ವರ್ಷ ತೆಂಗು ಇಳುವರಿ ಕಡಿಮೆಯಾಗಿದ್ದು, ಎಳನೀರಿನ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ಎಳನೀರು ಮಾರಾಟ ಮಾಡುವ ಸಹನಾ.
ಬಿಸಿಲಿನ ತೀವ್ರತೆ ಹೆಚ್ಚಾದಂತೆ ಎಳನೀರಿನ ಬೇಡಿಕೆಯು ಹೆಚ್ಚಾಗಿದೆ. ಜನವರಿ ತಿಂಗಳಲ್ಲಿ 40 ರೂಪಾಯಿಗೆ ದೊರೆಯುತ್ತಿದ್ದ ಎಳೆನೀರು ಪ್ರಸ್ತುತ 60ರಿಂದ 70 ರೂಪಾಯಿಗೆ ತಲುಪಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಎಳನೀರು ಬೆಲೆ ಏರಿಕೆ ಆಗಿರುವುದು ಮುಂದಿನ ದಿನದಲ್ಲಿ ಇನ್ನು ದುಪ್ಪಟ್ಟಾಗುವುದೆಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ.
ಕರ್ನಾಟಕದ 17 ಜಿಲ್ಲೆಯ 134 ತಾಲೂಕಿನಲ್ಲಿ ತೆಂಗು ಬೆಳೆಯಲಾಗುತ್ತದೆ. ತೆಂಗು ಬೆಳೆಯುವುದರಿಂದಲೇ ತುಮಕೂರು ಜಿಲ್ಲೆ ಕಲ್ಪತರು ನಾಡು ಎಂದು ಹೆಸರಾಗಿದೆ. ಕೊಬ್ಬರಿ ಬೆಲೆ ನಿರಂತರ ಕುಸಿತ, ತೆಂಗಿನಕಾಯಿ ಬೆಲೆ ಕುಸಿತ, ತೆಂಗಿಗೆ ಬರುವ ರೋಗದಿಂದ ರೖತರು ಅನಿವಾರ್ಯವಾಗಿ ಅಡಕೆ ಬೆಳೆ ಮೊರೆಹೋದ ಪರಿಣಾಮ ತೆಂಗು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಹಾಗೆ ಮಳೆ ಅಭಾವದಿಂದ ಈ ಬಾರಿ ಇಳುವರಿಯೂ ಕಡಿಮೆಯಾಗಿದೆ. ಹೀಗೆ ಅನೇಕ ಕಾರಣದಿಂದ ಎಳನೀರು ದುಬಾರಿಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದಲಿತ ಹೋರಾಟಗಾರ ಲಕ್ಷ್ಮೀ ನಾರಾಯಣರ ನೆನೆದ ಸಚಿವ ಶಿವಾನಂದ ಪಾಟೀಲ
ಹೊರ ಜಿಲ್ಲೆಳಿಂದ ಹಾಗೂ ಸ್ಥಳೀಯವಾಗಿಯೂ ಎಳನೀರು ಇಳಿಸಲಾಗುತಿತ್ತು. ಅದರೆ ಈಗ ಹೊರ ಜಿಲ್ಲೆಯಿಂದ ಬರುವ ಪ್ರಮಾಣವೂ ಕಡಿಮೆಯಾಗಿದೆ. ತೆಂಗಿನಕಾಯಿ ಬೆಲೆ ಏರಿಕೆ ಆಗಿರುವುದರಿಂದ ರೈತರು ಸ್ಥಳೀಯವಾಗಿ ಎಳನೀರು ಇಳಿಸುತ್ತಿಲ್ಲ.
ಎಳನೀರಿನ ಬೆಲೆ ದುಬಾರಿಯಾಗಿದ್ದರೂ ಇದರ ಲಾಭ ಮಾತ್ರ ರೈತರ ಕೈ ಸೇರುತ್ತಿಲ್ಲ. ಮೊದಲು ಏನು ಬೆಲೆ ಸಿಗುತ್ತಿತ್ತೋ ಆದೇ ಬೆಲೆಗೆ ಎಳನೀರನ್ನು ಖರೀದಿ ಮಾಡಲಾಗುತ್ತಿದೆ. ಅದರೆ ಗ್ರಾಹಕರಿಗೆ ಮಾರುವಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ರೈತರಿಗೆ ನ್ಯಾಯಯುತ ಬೆಲೆ ಕೊಡಿಸಲು ತುಮಕೂರು ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.
