ಗ್ಯಾರಂಟಿಗಳಿಗೆ ಬಳಸಿರುವ ಎಸ್‌ಸಿಎಸ್‌ಪಿ / ಟಿಎಸ್‌ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಕೂಡಲೇ ಹಿಂದಿರುಗಿಸಬೇಕೆಂದು ಹಾಗೂ ಕಾಯ್ದೆಯ ‘7ಡಿ’ ಸೆಕ್ಷನ್ ರದ್ದುಪಡಿಸಿದಂತೆ ‘7ಸಿ’ ಯನ್ನೂ ರದ್ದುಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.
ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕೆಂದು ಒತ್ತಾಯಿಸುತ್ತದೆ. ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬಾಕಿ ಉಳಿದಿರುವ 5 ಲಕ್ಷ ಅರ್ಜಿಗಳನ್ನು ಸೂಕ್ತ ನೆರವು ನೀಡಿ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ.
ಇದನ್ನು ಓದಿದ್ದೀರಾ? ಕೊಪ್ಪಳ | ಅಮಿತ್ ಶಾ ನಾಡಿನ ಜನತೆಯ ಕ್ಷಮೆಯಾಚಿಸಿ, ರಾಜೀನಾಮೆ ನೀಡುವಂತೆ ಡಿಎಸ್‌ಎಸ್ ಆಗ್ರಹ
“2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಜಾರಿಗೆ ತಂದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ ಎನ್ನುತ್ತದೆ. ಅದರಲ್ಲಿಯೇ ‘ಅಭಿವೃದ್ಧಿಯ ಅಂತರ’ ಎಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎಂದು ವ್ಯಾಖ್ಯಾನಿಸುತ್ತದೆ. ಸಾರಾಂಶದಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ” ಎಂದು ಯೋಜನೆಯ ಬಗ್ಗೆ ಸಂಘಟನೆಯು ವಿವರಿಸಿದೆ.
“2023-24ನೇ ಸಾಲಿನಿಂದಲೂ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣದಲ್ಲಿ ಸುಮಾರು 25000 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗೂ, 15000 ಕೋಟಿ ರೂಪಾಯಿ ಹಣವನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಮಾಡಿದಂತಾಗಿದೆ” ಎಂದು ಸರ್ಕಾರದ ವಿರುದ್ದ ಡಿಎಸ್‌ಎಸ್ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಡಿಎಸ್‌ಎಸ್ ಆಗ್ರಹ
“ಅದಷ್ಟೇ ಅಲ್ಲದೆ ಸರ್ಕಾರದ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಶೋಚನೀಯ. ದಲಿತರ ಒಗ್ಗಟ್ಟಿನ ಓಟುಗಳಿಂದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಸಮುದಾಯದಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ” ಎಂದು ತಿಳಿಸಿದೆ.
“ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ. ಆದರೆ ಅವುಗಳ ಉದ್ದೇಶವೇ ಬೇರೆ, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಕಾಯ್ದೆಯ ಉದ್ದೇಶವೇ ಬೇರೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಸಚಿವರು ಮತ್ತು ಮುಖ್ಯಮಂತ್ರಿಗಳು ಹೇಳುತ್ತಿರವಂತೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್‌ಸಿಎಸ್‌ಪಿ/ ಟಿಎಸ್‌ಪಿಯ ಹೊರತಾದ ಅಭಿವೃದ್ಧಿ ಯೋಜನೆಗಳಿಗೆ ಬಳಸುವುದೂ ಬಡತನ ನಿರ್ಮೂಲನೆಯ ಉದ್ದೇಶವನ್ನೇ ಹೊಂದಿದೆ ಎಂಬ ಸಮರ್ಥನೆ ಒಪ್ಪತಕ್ಕುದಲ್ಲ” ಎಂದು ಹೇಳಿದೆ.
“ಹಾಗೇನಾದರೂ ಅವರ ಮಾತು ನಿಜವಾಗಿದ್ದರೆ ಕಳೆದ 2014ರಿಂದ ಇದೇ ದಲಿತರಿಗಾಗಿ ಮೀಸಲಿಟ್ಟ 29,5687 ಕೋಟಿ ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಲಾಗಿದೆ? ಎಷ್ಟು ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ? ಎಂಬ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ ಹಾಗೂ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ? ಎಷ್ಟು ಅಭಿವೃದ್ಧಿ ಆಗಿದೆ? ಎಂಬುದನ್ನು ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಬೇಕಿದೆ” ಎಂದು ಒತ್ತಾಯಿಸಿದೆ.
