ಬೆಳಗಾವಿಯಲ್ಲಿ ಕನ್ನಡಿಗರನ್ನು ಗುರಿಯಾಗಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಭಾಷೆ ವಿಚಾರವಾಗಿ ಖ್ಯಾತೆ ತೆಗೆದಿರುವುದನ್ನು ಖಂಡಿಸಿ ಮೈಸೂರಿನ ಅಗ್ರಹಾರದ ವೃತ್ತದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರ ಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಿ, ಮರಾಠಿ ಪುಂಡರಿಗೆ ಶಿಕ್ಷೆಯಾಗಬೇಕು, ಕನ್ನಡ ವಿರೋಧಿಗಳಿಗೆ ಧಿಕ್ಕಾರ, ಎಂಇಎಸ್ ಪುಂಡರಿಗೆ ಧಿಕ್ಕಾರ, ಕನ್ನಡ ವಿರೋಧಿಗಳಿಗೆ ಧಿಕ್ಕಾರ, ಬೆಳಗಾವಿ ರಾಜಕಾರಣಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಬಿ ಬಿ ರಾಜಶೇಖರ್ ಮಾತನಾಡಿ ” ರಾಜ್ಯದಲ್ಲಿ ಬಹಳಷ್ಟು ಮಂದಿ ಮರಾಠಿಗಳು ಉದ್ಯಮ ನಡೆಸುತ್ತಿದ್ದಾರೆ. ಅವರಿಗೆ ಕನ್ನಡಿಗರಿಂದ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ. ಮರಾಠಿಗರು ಏಕೆ ಈ ರೀತಿ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರ ಮರ್ಮವೇನು? ಎಲ್ಲವೂ ರಾಜಕೀಯದ ದುರುದ್ದೇಶ. ನಾವೆಲ್ಲರೂ ಅಣ್ಣ ತಮ್ಮಂದಿರರಂತೆ ಸೌಹಾರ್ದತೆಯಿಂದ ಇರಬೇಕು. ಈ ರೀತಿಯ ಘಟನೆ ಮತ್ತೆ ಮರುಕಳಿಸಿದರೆ ರಾಜ್ಯಾದ್ಯಂತ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ” ಎಚ್ಚರಿಕೆ ನೀಡಿದರು.
” ಬೆಳಗಾವಿ ಭಾಗದಲ್ಲಿರುವ ರಾಜಕಾರಣಿಗಳಿಂದ ಕನ್ನಡಿಗರಿಗೆ ಈ ಸ್ಥಿತಿ ನಿರ್ಮಾಣವಾಗಿದ್ದು, ಕನ್ನಡಿಗರ ಮತದಿಂದ ಗೆದ್ದು, ಮರಾಠಿಯಲ್ಲಿ ಭಾಷಣ ಮಾಡುವ ಮೂಲಕ ಅವರನ್ನು ಪ್ರಚೋದನೆಗೊಳಿಸುತ್ತಿದ್ದಾರೆ, ಅಧಿಕಾರದ ವ್ಯಾಮೋಹ ಕೀಳುಮಟ್ಟಕ್ಕೆ ಇಳಿಸಿದೆ. ಅಧಿಕಾರಿಗಳು ಅದಕ್ಕೆಲ್ಲ ಕುಮ್ಮಕ್ಕು ನೀಡುತ್ತಿದ್ದಾರೆ. ಮತ್ತೊಂದೆಡೆ ಮರಾಠ ಪ್ರಾಧಿಕಾರವನ್ನು ಮಾಡಿದ್ದಾರೆ, ಅದನ್ನು ಕೂಡಲೇ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದರು.
ಹಿರಿಯ ಸಾಹಿತಿ ಬನ್ನೂರು ಕೆ ರಾಜು ಮಾತನಾಡಿ ” ಮರಾಠಿಗರ ದೌರ್ಜನ್ಯ ಇಂದಿನಿಂದ ಆರಂಭವಾಗಿಲ್ಲ. ಏಕೀಕರಣವಾಗುವುದಕ್ಕಿಂತ ಮುಂಚಿನಿಂದ ಇದೆ. ಈ ಬಗ್ಗೆ ಕರ್ನಾಟಕ ಏಕೀಕರಣವಾಗುವ ಮೊದಲ್ಲೇ ಆಲೂರು ವೆಂಕಟರಾಯರು ಮರಾಠಿಗರ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಿದರು. ಇಂದಿನ ಪರಿಸ್ಥಿತಿಗೆ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು “.
ಮಹಾಜನ್ ಆಯೋಗದ ವರದಿ ಪ್ರಕಾರ ಬೆಳಗಾವಿ ನಮ್ಮ ಕರ್ನಾಟಕದ ಅವಿಭಾಜಿತಾ ಅಂಗವಾಗಿದೆ. ರಾಜಕಾರಣಿಗಳು ಸರಿಯಾಗಿ ಅರ್ಥೈಸದೆ, ಗಮನ ಗಮನ ಹರಿಸದೆ ಹೋದರೆ ಬೆಳಗಾವಿ ಕಳೆದುಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
‘ ಕನ್ನಡಿಗರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲವಾದರೆ ಹೇಗೆ? ರಾಜಕಾರಣಿಗಳು ಬೆಳಗಾವಿಯನ್ನು ಮಾರಿಕೊಳ್ಳುತ್ತಾರೆ. ಕನ್ನಡದ ಬಗ್ಗೆ ಧ್ವನಿ ಎತ್ತುವವರು ಯಾರು ಇಲ್ಲ. ರಾಜಕಾರಣಿಗಳಿಂದ ಒಡೆದಾಳುವ ಕೆಲಸ ನೆಡೆಯುತ್ತಿದೆ ‘ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶಿಲಾಫಲಕದ ಮೇಲೆ ಮೂಡಿದ ‘ಸಂವಿಧಾನ ಪೀಠಿಕೆ’
ಪ್ರತಿಭಟನೆಯಲ್ಲಿ ಡಿಪಿಕೆ ಪರಮೇಶ್, ಸಿಂಧುವಳ್ಳಿ ಶಿವಕುಮಾರ್, ನಂಜುಂಡ, ಅನುರಾಜ್ ಗೌಡ, ಮಂಜುಳ, ಕೃಷ್ಣಪ್ಪ, ರಾಧಕೃಷ್ಣ, ಭಾಗ್ಯ, ಕಿರಣ್, ರಾಮು, ಮಹದೇವಸ್ವಾಮಿ, ಗಿರೀಶ್, ರಾಜು, ಶ್ರೀನಿವಾಸ್, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
