ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳ ಫೆಲೋಶಿಪ್ ಅನ್ನು ಮರು ಪರಿಶೀಲಿಸಿ ಮೂಲ ಸ್ವರೂಪದಲ್ಲಿಯೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ (ಎಸ್‌ಐಒ) ಸರ್ಕಾರಕ್ಕೆ ಮನವಿ ಮಾಡಿದೆ.
ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಮತ್ತು ಪ್ರತಿಭೆಯ ಮೂಲಕ ಸಾಮಾಜಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇತ್ತೀಚಿನ ಸರ್ಕಾರದ ಬದಲಾದ ನೀತಿಗಳಿಂದ ಡಾಕ್ಟರೇಟ್ ಅಧ್ಯಯನವನ್ನು ಕೈಗೊಂಡಿರುವ ಅನೇಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಈ ಹಿಂದೆ ಅಲ್ಪಸಂಖ್ಯಾತ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ ₹25,000 ಫೆಲೋಶಿಪ್ ನೀಡುತ್ತಿತ್ತು. ಅದನ್ನು ಈಗ ₹8,333ಕ್ಕೆ ಇಳಿಸಲಾಗಿದೆ. ಈ ಮಹತ್ವದ ಕಡಿತದಿಂದ ಸಂಶೋಧಕರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದು ಅವರ ಶೈಕ್ಷಣಿಕ ಅನ್ವೇಷಣೆಗಳಿಗೆ ಅಪಾಯವನ್ನುಂಟು ಮಾಡಿದೆ. ಡಾಕ್ಟರೇಟ್ ಅಧ್ಯಯನಗಳಿಗೆ ಪೂರ್ಣ ಸಮಯದ ಬದ್ಧತೆಯ ಅಗತ್ಯವಿರುತ್ತದೆ. ಇದನ್ನು ಹಣಕಾಸಿನ ಬೆಂಬಲವಿಲ್ಲದೆ ಮುಂದುವರೆಸುವುದು ಕಷ್ಟಕರ. ಅನೇಕ ಅರ್ಹ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯನ್ನು ತ್ಯಜಿಸಲು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಾಗಾಗಿ ಕೂಡಲೇ ಫೆಲೋಶಿಪ್ ಮರು ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ವಿಧಾನಸೌಧದ ಆವರಣದಲ್ಲಿ ಇಂದಿನಿಂದ ʼಪುಸ್ತಕ ಮೇಳʼ
ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಒಟ್ಟು ದಾಖಲಾತಿ ಅನುಪಾತ ಗಮನಾರ್ಹವಾಗಿ ಕಡಿಮೆಯಾಗಿದೆ. 2020-21ರಂತೆ, ಮುಸ್ಲಿಮರ ದಾಖಲಾತಿ ಅನುಪಾತ 8.91% ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ 27.1% ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹಣಕಾಸಿನ ತೊಡಕು ಪ್ರಾಥಮಿಕ ತಡೆಗೋಡೆಯಾಗಿದ್ದು ಇದು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಲ್ಲಿ ಮುಂದುವರೆಯುವುದನ್ನು ತಡೆಯುತ್ತಿದೆ. ಫೆಲೋಶಿಪ್‌ನಲ್ಲಿನ ಕಡಿತವು ಈ ಸಮಸ್ಯೆಯನ್ನು ಇನ್ನಷ್ಟು ಹದಗೇಡಿಸುತ್ತಿದೆ. ಇದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಮತ್ತಷ್ಟು ತಡೆಯಾಗುತ್ತಿದೆ ಎಂದು ಶೋಚನೀಯ. ಆದ್ದರಿಂದ ಸರ್ಕಾರ ತಡಮಾಡದೆ ₹25,000ಕ್ಕೆ ತುರ್ತಾಗಿ ಫೆಲೋಶಿಪ್ ಮರುಜಾರಿಗೊಳಿಸುವಂತೆ ಒತ್ತಾಯಿಸಿದೆ.
