ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಟೆಕ್ಕಿಯೊಬ್ಬನನ್ನು ಆನೇಕಲ್ ತಾಲೂಕಿನ ಜಿಗಣಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಐಫೋನ್ ಸೇರಿದಂತೆ 6 ಮೊಬೈಲ್ ಹಾಗೂ 1 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಟೆಕ್ಕಿ ಗೋವಿಂದರಾಜು ತುಮಕೂರು ಜಿಲ್ಲೆಯ ಪಾವಗಡದವನಾಗಿದ್ದು, ಜಿಗಣಿ ಸಮೀಪದ ಬುಕ್ಕಸಾಗರದಲ್ಲಿ ವಾಸವಿದ್ದ. ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಬೆಟ್ಟಿಂಗ್ ನಡೆಸಿದ್ದ. ಖಚಿತ ಮಾಹಿತಿ ಮೇರೆಗೆ ಗೋವಿಂದರಾಜು ಮನೆಗೆ ತೆರಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಮೊಬೈಲ್‌ಗಳು, 50ಕ್ಕೂ ಹೆಚ್ಚು ವಿವಿಧ ಕಂಪನಿಗಳ ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದು, ಆರೋಪಿ ಖಾತೆಯಲ್ಲಿರುವ 11 ಲಕ್ಷ ಹಣವನ್ನು ಫ್ರೀಜ್ ಮಾಡುವಂತೆ ಬ್ಯಾಂಕ್‌ಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ಮಂಜುನಾಥ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಆನೇಕಲ್ | ಜಿಗಣಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ; ಮೀನುಗಾರರಿಗೆ ಎಚ್ಚರಿಕೆ ನೀಡಿದ ಪುರಸಭೆ
ಎಂಜಿನಿಯರಿಂಗ್ ಪದವೀಧರನಾಗಿರುವ ಗೋವಿಂದರಾಜು ಕಾಲೇಜು ದಿನಗಳಿಂದಲೇ ಬೆಟ್ಟಿಂಗ್ ಬುಕ್ಕಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು ಬೆಟ್ಟಿಂಗ್ ಅನ್ನೇ ದಂಧೆಯಾಗಿಸಿಕೊಂಡಿದ್ದ ಎನ್ನಲಾಗಿದೆ.
