ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಮೂವರು ಬಿಜೆಪಿ ಎಂಎಲ್‌ಸಿಗಳು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಡೆಯಲಿದೆ. ಜೂನ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಶೆಟ್ಟರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಶೆಟ್ಟರ್ ಜೊತೆಗೆ ಎಂಎಲ್‌ಎ ಅಥವಾ ಎಂಎಲ್‌ಸಿ ಆಗಿರದೇ ಸಚಿವರಾಗಿರುವ ಎನ್.ಎಸ್ ಬೋಸರಾಜು ಅವರೂ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಿಜೆಪಿಯ ಲಿಂಗಾಯತ ನಾಯಕರಲ್ಲಿ ಒಬ್ಬರಲ್ಲಿ ಒಬ್ಬರಾಗಿದ್ದ ಶೆಟ್ಟರ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ಬಳಿಕ, ಅವರು ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧಿಸಿ ಸೋಲುಂಡರು. ಅವರಿಗೆ ಸರ್ಕಾರದಲ್ಲಿ ಸ್ಥಾನಮಾನ ಕಲ್ಪಿಸಲು ಕಾಂಗ್ರೆಸ್ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.
ವಿಶೇಷವಾಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್‌ಗೆ ಶೆಟ್ಟರ್ ಪ್ರಭಾವವೂ ಅಗತ್ಯವಾಗಿದೆ. ಲಿಂಗಾಯತ ಮತಗಳನ್ನು ಪಕ್ಷದತ್ತ ಸೆಳೆಯಲು ಶೆಟ್ಟರ್ ಮುಂಚೂಣಿಯಲ್ಲಿರುವ ಅಗತ್ಯ ಕಾಂಗ್ರೆಸ್‌ಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕೇಂದ್ರ ಸರ್ಕಾರದಿಂದ ಷಡ್ಯಂತ್ರ: ಪ್ರಿಯಾಂಕ್ ಖರ್ಗೆ ಕಿಡಿ
“ಲಿಂಗಾಯತ ಸಮುದಾಯಕ್ಕೆ ಸಂದೇಶವನ್ನು ಕಳುಹಿಸಲು ಮತ್ತು ಶೆಟ್ಟರ್ ಅವರ ಅನುಭವವನ್ನು ಬಳಸಿಕೊಳ್ಳಲು ಪಕ್ಷವು ಬಯಸುತ್ತದೆ” ಎಂದು ಕಾಂಗ್ರೆಸ್ ಹಿರಿಯ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ.
“ಶೆಟ್ಟರ್ ಅವರು ಎಂಎಲ್‌ಸಿಯಾಗಿ ಆಯ್ಕೆಯಾದ ನಂತರ ಪಕ್ಷವು ಅವರಿಗೆ ಮಹತ್ವದ ಜವಾಬ್ದಾರಿ ನೀಡಲಿದೆ ಎಂಬ ವಿಶ್ವಾಸವಿದೆ” ಎಂದು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹೇಳಿದ್ದಾರೆ.
ಬಿಜೆಪಿಯಿಂದ ಆಯ್ಕೆಯಾಗಿ ಎಂಎಲ್‌ಸಿಗಳಾಗಿದ್ದ ಬಾಬುರಾವ್ ಚಿಂಚನಸೂರ್, ಆರ್ ಶಂಕರ್ ಮತ್ತು ಲಕ್ಷ್ಮಣ ಸವದಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ರಾಜೀನಾಮೆ ನೀಡಿದ್ದರು. ಈ ಮುವರಲ್ಲಿ ಲಕ್ಷ್ಮಣ ಸವದಿ ಮಾತ್ರ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ನಾಳೆಯಿಂದ ‘ಗೃಹಲಕ್ಷ್ಮಿ’ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ: ಲಕ್ಷ್ಮಿ ಹೆಬ್ಬಾಳ್ಕರ್