ಬೆಂಗಳೂರಿನ ಹಲವು ಮನೆಗಳಿಗೆ ಕನ್ನ ಹಾಕಿ, ಕಳ್ಳತನ ಮಾಡುತ್ತಿದ್ದ ಮೂವರು ವಿದೇಶಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು, ಬಂಧಿತರಿಂದ ₹10.45 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರೆಲ್ಲರೂ ನೇಪಾಳ ದೇಶದ ನಿವಾಸಿಗಳು ಎಂದು ತಿಳಿಸಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಸರಹದ್ದಿನ ಅಮರಜ್ಯೋತಿ ಲೇಔಟ್‌ನಲ್ಲಿ ವಾಸವಿರುವ ನಿವಾಸಿಯೋರ್ವರು, 12/08/2023 ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದರು. ದೂರಿನಲ್ಲಿ ಆ.11,2023ರಂದು ರಾತ್ರಿ ಮೊದಲನೆಯ ಮಹಡಿಯ ಮನೆಗೆ ಬೀಗ ಹಾಕಿಕೊಂಡು ಕೆಳ ಮಹಡಿಯಲ್ಲಿ ಮಲಗಿದ್ದ ವೇಳೆ, ಯಾರೋ ಅಪರಿಚಿತರು ಒಡೆದು, ಕೊಠಡಿಯ ಕಬೋರ್ಡಿನಲ್ಲಿಟ್ಟಿದ್ದ 61 ಗ್ರಾಂ ಚಿನ್ನಾಭರಣಗಳು ಹಾಗೂ 3 ಲಕ್ಷ ನಗದನ್ನು ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಕಳೆದ ಜನವರಿ 20ರಂದು ಬೆಳ್ಳಂದೂರಿನ ಟಿನ್ ಶೆಡ್. ನ್ಯೂ ಹಾರಿಜನ್ ಕಾಲೇಜು ಬಳಿ ಓರ್ವ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, 2021-22ನೇ ಸಾಲಿನಲ್ಲಿ ಸೆಕ್ಯೂರಿಟಿ ಕೆಲಸಕ್ಕೆಂದು ಈ ಪ್ರಕರಣದಲ್ಲಿ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಹಾಗೂ ಈ ಪ್ರಕರಣದಲ್ಲಿ ಇನ್ನೂ ಮೂವರು ಸಹಚರರು ಭಾಗಿಯಾಗಿರುವುದಾಗಿ ಮತ್ತು ಬೆಂಗಳೂರಿನ ವಿವಿಧ ಕಡೆ ಮನೆಗಳಲ್ಲಿ ಕನ್ನ ಕಳವು ಮಾಡಿರುವುದಾಗಿ ತಿಳಿಸಿದ್ದನು.

21/01/2025 ರಂದು ಮೊದಲ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಿದಾಗ,ಈ ಪ್ರಕರಣದಲ್ಲಿ ಕಳವು ಮಾಡಿದ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ದೇವರಬೀಸನಹಳ್ಳಿ ರಸ್ತೆ, ಬೆಳ್ಳಂದೂರಿನಲ್ಲಿ ವಾಸವಿರುವ ಸಂಬಂಧಿಕನೋರ್ವನಿಗೆ ನೀಡಿರುವುದಾಗಿ ತಿಳಿಸಿದ್ದನು.
ಆರೋಪಿತನು ಸಂಬಂಧಿಕನೋರ್ವನಿಗೆ ನೀಡಿದ್ದ 212 ಗಾಂ ಚಿನ್ನಾಭರಣವನ್ನು ದೇವರಬೀಸನಹಳ್ಳಿ ರಸ್ತೆ, ಬೆಳ್ಳಂದೂರಿನಲ್ಲಿರುವ ಆತನ ವಾಸದ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಬಳಿಕ ಜ.28ರಂದು ಬೆಳ್ಳಂದೂರಿನ ಟಿನ್ ಶೆಡ್. ನ್ಯೂ ಹಾರಿಜನ್ ಕಾಲೇಜು ಬಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವಿದೇಶಿ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ವ್ಯಕ್ತಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟು 212 ಗ್ರಾಂ ಚಿನ್ನಾಭರಣವನ್ನು ವರಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ 10.45 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ 4 ಕನ್ನ ಕಳವು ಪ್ರಕರಣಗಳು, ಕೊಡಿಗೆಹಳ್ಳಿ ಪೊಲೀಸ್ ಠಾಣೆಯ 1 ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 5 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ ದಿವಾಳಿಯಾಗಲಿದೆ ಎಂದು ಟ್ರಂಪ್‌ಗೆ ಎಚ್ಚರಿಕೆ ನೀಡಿದ ಎಲಾನ್ ಮಸ್ಕ್
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಈಶಾನ್ಯ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಸಜೀತ್ ವಿ ಜೆ ಅವರ ಮಾರ್ಗದರ್ಶನದಲಿ, ಸಂಪಿಗೆಹಳ್ಳಿ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಮುರಗೇಂದ್ರಯ್ಯರವರ ನೇತೃತ್ವದಲ್ಲಿ, ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎಂ. ರವರ ಅಧಿಕಾರಿ,ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
