“ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಯನ್ನ ಅಸಂವಿಧಾನಿಕವಾಗಿ ತರುವುದಕ್ಕೆ ಮುಂದಾಗಿದೆ. ಇದರ ವಿರುದ್ಧವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಕೇಂದ್ರ ಸರ್ಕಾರ ಈ ತಿದ್ದುಪಡಿ ಮಾಡುತ್ತಿದೆ. ನಮ್ಮ ಸಂವಿಧಾನ ನಮಗೆ ಧಾರ್ಮಿಕ ಹಕ್ಕು ಕೊಟ್ಟಿದೆ. ನಮ್ಮ ಅಸ್ಮಿತೆಯನ್ನ ನಾಶಪಡಿಸುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ” ಎಂದು ಎಂಎಂವೈಸಿ ಅಧ್ಯಕ್ಷ ಅಬೂಬಕ್ಕರ್ ಹೇಳಿದರು.
ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಮುಸ್ಲಿಂ ಮತ್ತು ಬ್ಯಾರಿ ಸಂಘಟನೆಗಳ ಒಕ್ಕೂಟ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
ಅಖಿಲ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಬ್ದುಲ್ ನಹೀಮ್ ಮಾತನಾಡಿ, “ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕ್ಫ್ ಮಸೂದೆಯನ್ನ ನಿರ್ನಾಮ ಮಾಡುವ ಕೆಲಸವನ್ನ ಮಾಡಬಾರದು. ಪುರಾತನ ಕಾಲದಿಂದಲೂ ವಕ್ಫ್ ಬಿಲ್ ಅನ್ನು ಪೂಜ್ಯರಿಂದ ನಾವು ದಾನವಾಗಿ ಪಡೆದುಕೊಂಡು ಬಂದಿದ್ದೇವೆ. ಇದನ್ನ ಈಗಿನ ಪೀಳಿಗೆಯವರಾದ ನಾವು ನಾಶಪಡಿಸಲು ಬಿಡುವುದಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ವಕ್ಫ್ ಮಸೂದೆಯ ತಿದ್ದುಪಡಿ ಕಾಯ್ದೆ ಮಾಡುತ್ತೇವೆ ಎಂದು ಸಂಪೂರ್ಣವಾಗಿ ಮುಸಲ್ಮಾನರನ್ನು ನಿರ್ನಾಮ ಮಾಡುವ ಪ್ರಯತ್ನ ಪಡುತ್ತಿದೆ. ಹಾಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಸಲ್ಮಾನರ ಬೇಡಿಕೆಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕು. ನಮ್ಮ ವಕ್ಫ್ ಮಸೂದೆಯನ್ನ ಸಂಪೂರ್ಣವಾಗಿ ರಕ್ಷಿಸಬೇಕು” ಎಂದು ವಿನಂತಿಸಿದರು.
ಒಕ್ಕೂಟದ ಮಹಮ್ಮದ್ ಜುನೇದ್ ಮಾತನಾಡಿ, “ಒಕ್ಕೂಟ ಸರ್ಕಾರ ಆಗಬೇಕಿದ್ದ ಕೇಂದ್ರ ಸರ್ಕಾರ ಮನುವಾದಿ ಸರ್ಕಾರವಾಗಿದೆ. ಬುರ್ಖಾ ವಿಚಾರವಾದ ಬಳಿಕ ಇದೀಗ ವಕ್ಫ್ ಮಸೂದೆಯ ವಿಚಾರವನ್ನ ಮುನ್ನೆಲೆಗೆ ತಂದಿದೆ. ಜನರಿಗಾಗಿರುವ ಸರ್ಕಾರ ಈಗ ಇಲ್ಲ. ಬದಲಾಗಿ ಜನರನ್ನ ಕ್ಯೂನಲ್ಲಿ ನಿಲ್ಲಿಸಬೇಕು. ಜನರು ನಿರಂತರ ಪ್ರತಿಭಟನೆ ಮಾಡಬೇಕು ಎಂಬುದು ಮನುವಾದಿ ಸರ್ಕಾರದ ಆಶಯವಾಗಿದೆ. ಹಿಂದುತ್ವದ ಆಧಾರದದಲ್ಲಿ ಮತಗಳ ದ್ರುವೀಕರಣ ಮಾಡಿಕೊಂಡು ಮನುವಾದಿಗಳು ನಿರಂತರ ಅಧಿಕಾರದಲ್ಲಿ ಕುಳಿತುಕೊಳ್ಳಬೇಕು ಎಂಬುದು ಇವರ ಪ್ರಮುಖ ಅಜೆಂಡಾವಾಗಿದೆ. ಆದರೆ, ಈ ದೇಶದ ಮುಸಲ್ಮಾನರೂ ಅಥವಾ ಈ ದೇಶದ ಮೂಲ ನಿವಾಸಿಗಳು ನಿರಂತರವಾಗಿ ರಸ್ತೆಬದಿಯಲ್ಲಿ ಪ್ರತಿಭಟನೆ ಮಾಡಬೇಕು. ಅವರು ನಿರಂತರವಾಗಿ ಅಧಿಕಾರದಲ್ಲಿ ಕುಳಿತುಕೊಳ್ಳಬೇಕು ಎಂಬುದು ಅವರ ಮುಖ್ಯ ಅಜೆಂಡಾ ಆಗಿದೆ ಎಂಬುದು ಎದ್ದು ಕಾಣುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಜೆಟ್ | ಬೆಂಗಳೂರು ಅಭಿವೃದ್ಧಿಗೆ ₹100 ಕೋಟಿ ಅನುದಾನ ನೀಡುವಂತೆ ಬಿಜೆಪಿ ನಿಯೋಗದಿಂದ ಸಿಎಂಗೆ ಮನವಿ
“ವಕ್ಫ್ ಆಸ್ತಿ ನಮ್ಮ ಹಿರೀಕರು ನಮಗೆ ನೀಡಿದ ಬಳುವಳಿ. ಇದನ್ನು ಯಾರೂ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಕೇಂದ್ರದ ಮೋದಿ ಸರ್ಕಾರದ ವಂಚನೆಯ ಭಾಗವಾಗಿ ಮುಸಲ್ಮಾನರ ವಕ್ಫ್ ಆಸ್ತಿ ಕಬಳಿಸುವ ಅಪಾಯಕಾರಿ ಕಾನೂನು ಜಾರಿಗೆ ತರುವ ಹುನ್ನಾರವನ್ನು ನಡೆಸುತ್ತಿದೆ. ಈ ರೀತಿಯ ಕೇಂದ್ರ ಸರ್ಕಾರದ ದ್ವಿಮುಖ ಧೋರಣೆಯನ್ನು ಖಂಡಿಸುತ್ತೇವೆ” ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ತಿದ್ದುಪಡಿ ಮಾಡಿದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. ಇದರಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನೀಡಿದ ಸಲಹೆಗಳಿವೆ. ಈ ಮಸೂದೆಯನ್ನು ಈಗ ಮಾರ್ಚ್ 10 ರಂದು ಪ್ರಾರಂಭವಾಗುವ ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಪರಿಚಯಿಸಲಾಗುವುದು ಎಂದು ವರದಿಗಳು ತಿಳಿಸಿವೆ.
