ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ.
ಶಾಂಕ್ಸಿ ಪ್ರಾಂತ್ಯದ ಸನ್ ಲಿಯಾಂಗ್ ಎಂಬ 17 ವರ್ಷದ ಬಾಲಕ ಫೆಬ್ರವರಿ 8 ರಂದು ಕ್ವಿನ್ಲಿಂಗ್ ಪರ್ವತ ಶ್ರೇಣಿಯಲ್ಲಿ ಏಕಾಂಗಿ ಚಾರಣಕ್ಕಾಗಿ ತೆರಳಿದ್ದ. ಬಾಲಕನ ಚಾರಣ ಆರಂಭವಾದ ಎರಡು ದಿನಗಳ ಬಳಿಕ, ಆತನ ಬಳಿ ಇದ್ದ ಬ್ಯಾಟರಿಗಳು ಖಾಲಿಯಾದ ಕಾರಣ ಬಾಲಕ ತನ್ನ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಎಂದು ಹೇಳಲಾಗಿದೆ.
ಏಕಾಂಗಿಯಾಗಿದ್ದ ತೆರಳಿದ್ದ ಬಾಲಕ ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಬೇರೆ ಯಾವುದೇ ಮಾರ್ಗಗಳಿಲ್ಲದೆ ಕಂಗಾಲಾಗಿದ್ದ. ತೊರೆಯೊಂದರ ಅಂಚಿನಲ್ಲಿ ನಡೆಯಲು ಪ್ರಾರಂಭಿಸಿದ್ದ. ಈ ವೇಳೆ, ಹಲವು ಬಾರಿ ಬಿದ್ದು, ಆತನಿಗೆ ಬಲಗೈ ಕೂಡ ಮುರಿದುಹೋಗಿದೆ ಎಂದು ತಿಳಿದುಬಂದಿದೆ
ಹಿಂದಿರುಗಲು ನಿರ್ದಿಷ್ಟ ದಾರಿಯೂ ಸಿಗದೆ, ತಿನ್ನಲು ಆಹಾರವೂ ಇಲ್ಲದೆ ವಿಶಾಲ ಪರ್ವತದಲ್ಲಿ ಏಕಾಂಗಿಯಾಗಿದ್ದ ಲಿಯಾಂಗ್, ನದಿ ನೀರು, ಹಿಮ ಹಾಗೂ ಟೂತ್‌ಪೇಸ್ಟ್ ಸೇವಿಸಿ ಬದುಕುಳಿದ್ದಿದ್ದಾನೆ. ಚಳಿಯಿಂದ ರಕ್ಷಣೆ ಪಡೆಯಲು ದೊಡ್ಡ ಬಂಡೆಯ ಹಿಂಭಾಗದಲ್ಲಿ ಒಣ ಹುಲ್ಲು ಮತ್ತು ಎಲೆಗಳನ್ನು ಬಳಸಿ ತಾತ್ಕಾಲಿಕ ಹಾಸಿಗೆಯನ್ನು ನಿರ್ಮಿಸಿಕೊಂಡಿದ್ದ ಎಂದು ವರದಿಯಾಗಿದೆ.
ಸಂಪರ್ಕಕ್ಕೆ ದೊರೆಯದ ಮಗನನ್ನು ಹುಡುಕಲು ಆತನ ಕುಟುಂಬವು ರಕ್ಷಣಾ ತಂಡದ ಮೊರೆಹೋಗಿತ್ತು. ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದ ರಕ್ಷಣಾ ತಂಡವು ಫೆಬ್ರವರಿ 17ರಂದು ಆತನನ್ನು ಪತ್ತೆ ಮಾಡಿದೆ. ಬಾಲಕನನ್ನು ರಕ್ಷಿಸಿದೆ.
“ಘಟನೆಯ ನಂತರ ನನಗೆ ಭಯವಾಗುತ್ತಿದೆ. ಈ ಪ್ರದೇಶ ಚಾರಣಕ್ಕೆ ಸೂಕ್ತವಲ್ಲ. ಜೋರಾಗಿ ಗಾಳಿ ಬೀಸುತ್ತದೆ. ನನ್ನೊಂದಿಗೆ ಎರಡು ಆಲ್ಪೆನ್‌ಸ್ಟಾಕ್‌ಗಳನ್ನು ಕೊಂಡೊಯ್ದಿದ್ದೆ. ಆದರೂ, ಚಾರಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹಿಮ ಎಷ್ಟು ದಟ್ಟವಾಗಿತ್ತೆಂದರೆ, ಕಣ್ಣುಗಳನ್ನು ತೆರೆಯುವುದೂ ಕಷ್ಟವಾಗಿತ್ತು” ಎಂದು ಲಿಯಾಂಗ್ ಹೇಳಿಕೊಂಡಿದ್ದಾನೆ.
ಕಳೆದ 20 ವರ್ಷಗಳಲ್ಲಿ ಈ ಅಪಾಯಕಾರಿ ಹಾದಿಯಲ್ಲಿ 50ಕ್ಕೂ ಹೆಚ್ಚು ಪಾದಯಾತ್ರಿಕರು ಕಾಣೆಯಾಗಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.