ಕಬ್ಬೂರು ಗ್ರಾಮದ ಸ್ಮಶಾನದ ವಿರೂಪ, ಅಕ್ರಮವಾಗಿ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳನ್ನು, ಅಸ್ಥಿಪಂಜರ ನಾಶ ಮಾಡಿರುವವರ ಹಾಗೂ ಕೆರೆ ಮತ್ತು ಗೋಮಾಳವನ್ನು ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ದಾವಣಗೆರೆ ತಾಲೂಕಿನ ಕಬ್ಬೂರಿನ ಗ್ರಾಮಸ್ಥರು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಬ್ಬೂರು ಗ್ರಾಮದಲ್ಲಿ ಸರ್ವೆ ನಂ.31-32ರಲ್ಲಿ ಸರ್ಕಾರಿ ಗೋಮಾಳದಲ್ಲಿ ಸರಿ ಸುಮಾರು 25-30 ವರ್ಷಗಳಿಂದ ಆದಿಕರ್ನಾಟಕ (ಎಸ್.ಸಿ), ನಾಯಕ ಜನಾಂಗ, ಮಡಿವಾಳ, ಗೊಲ್ಲ, ಭೋವಿ ಇತರೆ ಜನಾಂಗದ ನಮ್ಮ ಪೂರ್ವಜರ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿದ್ದೇವೆ. ನಮ್ಮ ಗ್ರಾಮಕ್ಕೆ ಸೇರಿದ ಕೆರೆಯ ಜಾಗವನ್ನು ಒತ್ತುವರಿ ಮಾಡಿ ಒತ್ತುವರಿದಾರರು ಆ ಜಾಗದಲ್ಲಿ ಅಡಿಕೆ, ತೆಂಗು ಹಾಗೂ ಇತರೆ ಬೆಳೆಗಳ ತೋಟಗಳನ್ನಾಗಿ ಪರಿವರ್ತಿಸಿಕೊಂಡು ಒತ್ತುವರಿ ಮಾಡಿದ್ದು ಮತ್ತು ನಮ್ಮ ಗ್ರಾಮಕ್ಕೆ ಸೇರಿದ ಸರ್ಕಾರಿ ಗೋಮಾಳದಲ್ಲಿ ಕೆಲ ಮಣ್ಣು ಮಾಫಿಯ ದಂಧೆಕೋರರು ಕೆಲವಾರು ವರ್ಷಗಳಿಂದ ಜಾನುವಾರುಗಳಿಗೆ ಪಶು ಪಕ್ಷಿಗಳಿಗೆ, ಕುರಿ-ಮೇಕೆಗಳ ಮೇವಿಗೆ ಆಶ್ರಯವಾದ ಗೋಮಾಳದಲ್ಲಿ 8-10 ಅಡಿ ಆಳದವರೆಗೆ ಜೆ.ಸಿ.ಬಿ ಮತ್ತು ಟ್ರಾಕ್ಟರ್‌ನಿಂದ ಮಣ್ಣನ್ನು ಅಗೆದು ಸಾಗಾಟ ಮಾಡಿ ಮಾರಾಟ ಮಾಡಿದ್ದಾರೆ.
ಜನವರಿ 10ರ ತಡರಾತ್ರಿಯಲ್ಲಿ ನಮ್ಮ ಪೂರ್ವಜರ ಸಮಾಧಿಗಳನ್ನು ಸಹ ನಾಶ ಮಾಡಿ ಅಲ್ಲಿನ ಅಸ್ಥಿಪಂಜರಗಳನ್ನು ಯಾವುದೇ ಕುರುಹುಗಳು ಸಿಗದಂತೆ ಮಾಡಿ ಅಲ್ಲಿನ ಮಣ್ಣನ್ನು ಸಾಗಾಟ ಮಾಡಿದ್ದಾರೆ. ಮರುದಿನ ಜನವರಿ 11ರ ಶನಿವಾರ ಬೆಳಿಗ್ಗೆ 9.00ಗಂಟೆಗೆ ಜೆ.ಸಿ.ಬಿ. ಮತ್ತು ಟ್ರಾಕ್ಟರ್‌ಗಳ ಮಾಲೀಕರನ್ನು ಕೇಳಿದಾಗ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಂದೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ.
ಆದ್ದರಿಂದ ಈ ಕೂಡಲೇ ಸ್ಮಶಾನದಲ್ಲಿ, ಗೋಮಾಳ, ಕೆರೆಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮಾಡಿರುವವರ ವಿರುದ್ಧ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದುವೆ ಸಂಭ್ರಮ; ಹತ್ತಕ್ಕೂ ಹೆಚ್ಚು ಮನೆಗಳ ಸರಣಿ ಕಳ್ಳತನ
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, ಮಂಜು ಕಬ್ಬೂರು, ಗ್ರಾಮಸ್ಥರಾದ ಕುಮಾರಪ್ಪ, ಮಲ್ಲಿಕಾರ್ಜುನ, ಶೇಖರಪ್ಪ, ಎಂ ರಾಮಚಂದ್ರಪ್ಪ, ಸಂದೀಪ್, ವಿಜಯಲಕ್ಷ್ಮಿ, ಎನ್ಎಂ ಕೋಟಿ, ಅಂಜನಪ್ಪ, ಗೋವಿಂದಪ್ಪ, ಬಸವರಾಜಪ್ಪ, ಮಂಜಪ್ಪ, ಮಹೇಶ್, ಯಲ್ಲೇಶ, ಮಂಜುನಾಥ ಸೇರಿದಂತೆ ಕಬ್ಬೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.