ಜಿಲ್ಲೆಯ 867 ಜನವಸತಿ ಪ್ರದೇಶಗಳಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬೀದರ್ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ನೀರಿನ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಈಗಾಗಲೇ 632 ಕಾಮಗಾರಿಗಳು ಪೂರ್ಣಗೊಂಡಿವೆ. ಶಾಶ್ವತ ನೀರಿನ ವಲಯ ಬಳಸಿ ನೀರು ಸರಬರಾಜು ಯೋಜನೆ ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಡಯಾಲಿಸಿಸ್ ರೋಗಿಗಳಿಗೆ ಬ್ರಿಮ್ಸ್‌ನಲ್ಲಿ ಚಿಕಿತ್ಸೆಗೆ ಕಾಯುವ ಸ್ಥಿತಿ ಇದೆ ಎಂದು ಸಾಕಷ್ಟು ದೂರುಗಳು ಬಂದಿವೆ. ಇನ್ನೂ ಹೆಚ್ಚಿನ ಡಯಾಲಿಸಿಸ್ ಮಶೀನ್‌ಗಳು ಬೇಕಿದ್ದಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ಒದಗಿಸಲಾಗುವುದು. ಆದರೆ, ರೋಗಿಗಳಿಗೆ ಚಿಕಿತ್ಸೆಗಾಗಿ ಕಾಯುವಂತೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಜಿಲ್ಲೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸೂಕ್ತ ಔಷಧೋಪಚಾರ, ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಅವರಿಗೆ ಸೂಚಿಸಿದ ಅವರು, ಬ್ರಿಮ್ಸ್‌ನಲ್ಲಿ ಅವ್ಯವಸ್ಥೆ ಸರಿಪಡಿಸಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಬ್ರಿಮ್ಸ್ ನಿರ್ದೇಶಕರು ಚರ್ಚಿಸಿ ಸಹಕಾರದಿಂದ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಬೇಕು. ಮಾರ್ಚ್ ಒಳಗೆ ಕ್ಯಾಥ್‌ಲ್ಯಾಬ್ ಆರಂಭಿಸುವಂತೆ ಸೂಚಿಸಿದರು.
‘ಕ್ಯಾನ್ಸರ್ ಪೀಡಿತ ರೋಗಿಗಳು ಜಿಲ್ಲೆಯ ಹೊರಗೆ ಕಿಮೋಥೆರೆಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಿಮ್ಸ್‌ನಲ್ಲಿ ಈಗಾಗಲೇ ‘ಡೇ ಕೇರ್’ ಕೀಮೋ ಕೇಂದ್ರ ಆರಂಭಿಸಿರುವ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು’ ಎಂದರು.’ಜಿಲ್ಲೆಯಿಂದ ಹಾದು ಹೋಗಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವ ಈಶ್ವರ ಬಿ. ಖಂಡ್ರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ವರ್ಷಕ್ಕೆ 300 ಅಪಘಾತಗಳು ಆಗುತ್ತಿವೆ. ಜಿಲ್ಲೆಯ ಎಲ್ಲ ವಾಹನಗಳಿಗೆ ರೇಡಿಯಂ ಸೈಕಲ್ ಕಡ್ಡಾಯವಾಗಿ ಅಂಟಿಸಬೇಕು. ಎಲ್ಲ ಪ್ರಮುಖ ರಸ್ತೆಗಳಲ್ಲಿ ವೃತ್ತಗಳಲ್ಲಿ ಉತ್ತಮ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಸೂಚಿಸಿದರು.
‘ನೌಬಾದ್ ನಿಲಂಗಾ ರಸ್ತೆ ಹಾಗೂ ಬೀದರ್ ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ತಗ್ಗುಗಳು ಹಾಗೂ ಉಬ್ಬುಗಳಿವೆ. ಅದರಿಂದ ಅಪಘಾತಗಳು ಸಂಭವಿಸುತ್ತಿದ್ದು ಕೂಡಲೇ ಸರಿಪಡಿಸಬೇಕು: ಎಂದರು.
ಹೊರ ಜಿಲ್ಲೆಯ ಮೀನುಗಾರರು ಸ್ಥಳೀಯ ಜಲಾಶಯಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಸ್ಥಳೀಯ ಮೀನುಗಾರರ ಸಂಘ ನಿರ್ಮಿಸಿ ಸ್ಥಳೀಯರಿಗೆ ಅನುಕೂಲವಾಗುವಂತೆ ಮಾಡಬೇಕು’ ಎಂದು ಹೇಳಿದರು.ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೊಳಪಡುವ ವಸತಿ ನಿಲಯ, ವಸತಿ ಶಾಲೆಗಳಿಗೆ ಕಟ್ಟಡ ಅಥವಾ ನಿವೇಶನ ಕೊರತೆ ಇರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು’ ಎಂದರು.
ಹಿಂದುಳಿದ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಪರಿಶಿಷ್ಟ ಪಂಗಡ ಅಭಿವೃದ್ಧಿ ಹಾಗೂ ಇತರೆ ಇಲಾಖೆಗಳು ಮುಂಬರುವ ಸಾಲಿನಲ್ಲಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣಕ್ಕೆ ಅನಾನುಕೂಲವಾಗದಂತೆ ವಸತಿ ನಿಲಯಕ್ಕೆ ಪ್ರವೇಶ ದೊರಕುವ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿರುವ ವಸತಿ ನಿಲಯದ ನಿವೇಶನ ಹಾಗೂ ಕಟ್ಟಡಗಳ ವಿವರವನ್ನು ನೀಡಿದಲ್ಲಿ ಮುಂಬರುವ ಕ್ಯಾಬಿನೆಟ್‍ನಲ್ಲಿ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
‘ಜಿಲ್ಲೆಯಲ್ಲಿ ಬಾಕಿಯಿರುವ ಎಲ್ಲ ಅಂಗನವಾಡಿ ಕಟ್ಟಡಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವ ಹಾಗೂ ಸ್ಥಾನವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ನೆನಪು | ವಿಶಿಷ್ಟ ಮ್ಯಾನರಿಸಂಗಳ ಮರೆಯಲಾರದ ನಟ ಜೀನ್ ಹ್ಯಾಕ್‌ಮನ್
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ, ಭೀಮರಾವ ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಹಾಜರಿದ್ದರು.