ರೈತರ ಮಕ್ಕಳಿಗೆ ತೋಟಗಾರಿಕಾ ಇಲಾಖೆ ವತಿಯಿಂದ 2025-26ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ತರಬೇತಿಯು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮದಲ್ಲಿರುವ ತರಬೇತಿ ಕೇಂದ್ರದಲ್ಲಿ 2025ರ ಮೇ 2 ರಿಂದ 2026ರ ಫೆ. 28ರ ವರೆಗೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ರೈತ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗಾಗಿ ಸಾಮಾನ್ಯ ಅಭ್ಯರ್ಥಿ 16, ಪರಿಶಿಷ್ಠ ಜಾತಿ 3 ಮತ್ತು ಪರಿಶಿಷ್ಟ ಪಂಗಡ 1 ರಂತೆ ಒಟ್ಟು 20 ಅಭ್ಯರ್ಥಿಗಳ ಗುರಿ ನಿಗದಿ ಪಡಿಸಲಾಗಿದೆ. ವಯೋಮಿತಿಯು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಹಾಗೂ ಇತರರಿಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ.
ಕನ್ನಡ ವಿಷಯಗಳೊಂದಿಗೆ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು ಚೆನ್ನಾಗಿ ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು. ತರಬೇತಿಯು ರೈತರ ಮಕ್ಕಳಿಗಾಗಿರುವುದರಿಂದ ಅಭ್ಯರ್ಥಿಯು ತಂದೆ, ತಾಯಿ ಅಥವಾ ಪೋಷಕರು (ತಂದೆ/ತಾಯಿ ಇಲ್ಲದ ಪಕ್ಷದಲ್ಲಿ) ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು.
ಅರ್ಜಿಶುಲ್ಕ, ಸಾಮಾನ್ಯ ಆಭ್ಯರ್ಥಿಗಳಿಗೆ ರೂ.30, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.15 ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್‌ನ್ನು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕೊಪ್ಪಳ ಇವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.
ಅರ್ಜಿಗಳನ್ನು ಇಂದಿನಿಂದ (ಮಾ.1) ರಿಂದ ಮಾ.30ರ ವರೆಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕೊಪ್ಪಳ, ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ), ಕೊಪ್ಪಳ ಇವರ ಕಚೇರಿಯಲ್ಲಿ ಪಡೆಯಬಹುದು ಅಥವಾ ಇಲಾಖಾ ವೆಬ್ ಸೈಟ್ www.horticulture.kar.nic.in ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿದ್ದೀರಾ?: ಕೆಯುಡಬ್ಲ್ಯೂಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಕಟ; ಮಾ.9ಕ್ಕೆ ಕೊಪ್ಪಳದಲ್ಲಿ ಪ್ರಶಸ್ತಿ ಪ್ರದಾನ
ಅರ್ಜಿಗಳನ್ನು ಭರ್ತಿ ಮಾಡಿ ಏಪ್ರಿಲ್ 1ರ ಸಂಜೆ 5.30 ಗಂಟೆಯೊಳಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ) ಕೊಪ್ಪಳ ಕಚೇರಿಗೆ ಸಲ್ಲಿಸಬೇಕು. ಏ. 8 ರಂದು ಬೆಳಗ್ಗೆ 10 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಈ ಸಂದರ್ಶನಕ್ಕೆ ಎಲ್ಲಾ ಮೂಲ ದಾಖಾಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರವನ್ನು ಕಳುಹಿಸಲಾಗುವುದಿಲ್ಲ ಎಂದು ತೋಟಗಾರಿಕೆ ಉಪ ನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
