ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿದ ರಾಜ್ಯ ಸರ್ಕಾರ ಇದೀಗ, ರಾಜ್ಯದಲ್ಲಿ ಮಾರಾಟವಾಗುವ ಖಾಸಗಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಉತ್ಪನ್ನಗಳ ಮೇಲಿನ ಗುರುತನ್ನು (ಲೇಬಲ್) ಕನ್ನಡದಲ್ಲೇ ಮುದ್ರಿಸಲು ರಾಜ್ಯದಲ್ಲಿ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದೆ.
ಮುಖ್ಯಮಂತ್ರಿಗಳ ಕಚೇರಿ ಶುಕ್ರವಾರ ರಾತ್ರಿ ಮಾಧ್ಯಮಗಳಿಗೆ ಸುತ್ತೋಲೆ ಪ್ರತಿಯನ್ನು ಬಿಡುಗಡೆ ಮಾಡಿದೆ.
‘ಈ ದಿನ.ಕಾಂ’ ಈ ಬಗ್ಗೆ ಗುರುವಾರ (ಫೆ.27) ‘ಕಂಪನಿಗಳ ಉತ್ಪನ್ನಗಳ (Products) ಮೇಲೆ ಹಿಂದಿ- ಇಂಗ್ಲಿಷ್ ಮೆರೆದಾಟ; ಕನ್ನಡ ಕಡ್ಡಾಯ ಯಾವಾಗ?’ ತಲೆಬರಹದಡಿ ಸುದೀರ್ಘ ವರದಿಯೊಂದನ್ನು ಪ್ರಕಟಿಸಿತ್ತು.
2024ರಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024’ ಫೆಬ್ರವರಿ 15ರಂದು ಕರ್ನಾಟಕ ವಿಧಾನಸಭೆಯು ಅಂಗೀಕರಿಸಿದ ಮೇಲೆ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು (60 ಕನ್ನಡ-40 ಇತರೆ ಭಾಷೆ) ಪ್ರದರ್ಶಿಸುವುದು ರಾಜ್ಯದಲ್ಲಿ ಕಡ್ಡಾಯವಾಗಿದೆ. ಆದರೆ, ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯವಾಗುವುದು ಯಾವಾಗ ಎಂದು ವರದಿಯಲ್ಲಿ ಪ್ರಶ್ನೆಯನ್ನು ಎತ್ತಲಾಗಿತ್ತು.
ವರದಿ ಪ್ರಕಟವಾದ ಮರುದಿನವೇ ಸ್ಪಂದಿಸಿರುವ ಸರ್ಕಾರ, ‘ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳ ಮೇಲೆ ಕನ್ನಡದ ಹೆಸರನ್ನ ಕಡ್ಡಾಯ ಎಂದು ಹೇಳಿದೆ. ಯಾವುದೇ ಉತ್ಪನ್ನಗಳಿರಲಿ ಕನ್ನಡದಲ್ಲಿ ಹೆಸರು ಇರಲೇಬೇಕು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಸ್ಟೋರಿ ಓದಿದ್ದೀರಾ? ಕಂಪನಿಗಳ ಉತ್ಪನ್ನಗಳ (Products) ಮೇಲೆ ಹಿಂದಿ- ಇಂಗ್ಲಿಷ್ ಮೆರೆದಾಟ; ಕನ್ನಡ ಕಡ್ಡಾಯ ಯಾವಾಗ?
“ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ ಇರಬೇಕು ಎಂದು ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕಳೆದ ನವೆಂಬರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ಮಾರ್ಚ್ ತಿಂಗಳ ಕೊನೆಯೊಳಗೆ ರಾಜ್ಯ ಸರ್ಕಾರದ ಆದೇಶ ಹೊರಬೀಳುವ ನಿರೀಕ್ಷೆಯಿದೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಶಾವಾದ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.
ಸುತ್ತೋಲೆಯಲ್ಲಿ ಏನಿದೆ?
ಭಾಷೆಯು ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆ ಆಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ದಿನಾಂಕ: 12.03.2024 ರಿಂದ ಜಾರಿಗೆ ತಂದಿರುತ್ತದೆ. ಸದರಿ ಅಧಿನಿಯಮದ ಕಲಂ 17 (7)ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದೆಂದು ತಿಳಿಸಲಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಕಡ್ಡಾಯವಾಗಿ ಮುದ್ರಿಸುವಂತೆ ಈ ಮೂಲಕ ಸೂಚಿಸಲಾಗಿದೆ ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ರ ಕಲಂ 9ರಡಿ ಗೊತ್ತುಪಡಿಸಿದ ಜಾರಿ ಪ್ರಾಧಿಕಾರಗಳು ಈ ಸೂಚನೆಗಳನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಎಲ್ಲಾ ಕೈಗಾರಿಕಾ ಮತ್ತು ಗ್ರಾಹಕ ವಸ್ತುಗಳ ಉತ್ಪನ್ನದಾರರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಬಗ್ಗೆ ಮೇಲ್ವಿಚಾರಣೆಯನ್ನು ಮಾಡುವಂತೆ ಸೂಚಿಸಲಾಗಿದೆ.
