ಈ ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲಾ ರಾಜ್ಯಗಳು ಸಮಾನಾಂತರ ಹಕ್ಕು ಹೊಂದಿವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಶನಿವಾರ ಮಾತನಾಡಿ, “ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಬೇಕಾದರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ಆದರೆ, ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒಂದಲ್ಲಾ ಒಂದು ರೀತಿ ಕಾನೂನು ಹಾಗೂ ನಿಯಮಗಳನ್ನು ಹೇರುತ್ತಿದೆ” ಎಂದರು.
“ತೆರಿಗೆ ವಿಚಾರದಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ನಾನು ಈಗಾಗಲೇ ಪ್ರಸ್ತಾಪ ಮಾಡಿದ್ದು, ನಾವು ಎಷ್ಟು ತೆರಿಗೆ ಕಟ್ಟುತ್ತಿದ್ದೇವೆ. ಎಷ್ಟು ಪಾಲು ಅವರು ನೀಡುತ್ತಿದ್ದಾರೆ. ರಾಜ್ಯಗಳ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ, ಕೇಂದ್ರ ಸರ್ಕಾರ ನಮ್ಮ ರಾಜ್ಯಗಳನ್ನು ಯಾವ ದೃಷ್ಟಿಯಿಂದ ನೋಡುತ್ತಿದೆ ಎಂದು ಹೇಳಿದ್ದೇನೆ” ಎಂದರು.
“ಇನ್ನು ಹಿಂದಿ ಹೇರಿಕೆ ವಿಚಾರವೂ ರಾಜ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಆರ್ಥಿಕ ನೀತಿಯಲ್ಲಿ ಶೇ.1ರಷ್ಟು ತೆರಿಗೆ ಪಾಲು ಕಡಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಜನ ತಿರುಗಿ ಬಿದ್ದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ನೀಡುವುದನ್ನು ಕಲಿಯಬೇಕು. ಕೇಂದ್ರ ಸರ್ಕಾರದ ತೀರ್ಮಾನಗಳು ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವಂತೆ ಇರಬೇಕು. ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಎಚ್ಚರಿಸಿದರು.
ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು
“ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ, ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೇನೆ. ಈ ವರ್ಷ ಜನಗಣತಿ ನಡೆಯುವ ಸಾಧ್ಯತೆ ಇದ್ದು, ಮಹಿಳಾ ಮೀಸಲಾತಿ ಜಾರಿಯನ್ನು ಮಾಡಲಾಗುತ್ತಿದೆ. ಜನಸಂಖ್ಯೆ ಹಾಗೂ ಕ್ಷೇತ್ರ ವಿಂಗಡಣೆ ನೋಡಿದರೆ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಉತ್ತರ ಭಾರತದ ಪಾಲಾಗಲಿದೆ. ಇದನ್ನು ಸಾಧಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಇದರ ವಿರುದ್ಧ ನಮ್ಮ ಕನ್ನಡಿಗರು, ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ದಕ್ಷಿಣ ಭಾರತದ ಮೇಲೆ ಕೇಂದ್ರ ತೋರುತ್ತಿರುವ ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು. ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಎಲ್ಲಾ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಅತ್ಯಾಚಾರ ಮಾಡಿರುವವರ ಬಗ್ಗೆ ಮಾತನಾಡುವುದಿಲ್ಲ
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೆದರಿಸುತ್ತಿದ್ದಾರೆ ಎಂಬ ಮುನಿರತ್ನ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಕುರಿತು ನಾನು ಮಾತನಾಡುವುದಿಲ್ಲ. ಮಾಧ್ಯಮಗಳು ಇಂತಹವರ ಬಗ್ಗೆ ಕೇಳುತ್ತಿದ್ದೀರಾ? ಆತನ ಅತ್ಯಾಚಾರ ಪ್ರಕರಣಗಳ ಬಗ್ಗೆ, ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಲಿ. ಆತ ಓರ್ವ ರೇಪಿಸ್ಟ್ ಎಂದು ದೂರುದಾರರು ಹೇಳಿದ್ದಾರೆ. ದೇವಾಲಯ ಎಂದು ಪರಿಗಣಿಸಿರುವ ವಿಧಾನಸೌಧದಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅತ್ಯಾಚಾರದ ಬಗ್ಗೆ ನೀವು ಆತನನ್ನು ಪ್ರಶ್ನೆ ಮಾಡಿದ್ದೀರಾ? ಈ ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಆತನನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು” ಎಂದು ಒತ್ತಾಯಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸತೀಶ್ ಜಾರಕಿಹೊಳಿ ಭೇಟಿ
ಸತೀಶ್ ಜಾರಕಿಹೊಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ರಾಮನಗರ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಭೇಟಿ ಮಾಡಿದ್ದೆ. ಸಿಎಂ ಜತೆ ಚರ್ಚಿಸಿ ಫೆಬ್ರವರಿ ಕೊನೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದರು. ಬಜೆಟ್ ಮುಗಿದ ನಂತರ ಮಾಡುವುದಾಗಿ ಹೇಳಿದ್ದಾರೆ. ನಾನು ಹೊಸದಾಗಿ ಅವರನ್ನು ಭೇಟಿ ಮಾಡಿಲ್ಲ. ಸುಮಾರು ಹತ್ತಾರು ಬಾರಿ ಭೇಟಿ ಮಾಡಿದ್ದೇನೆ. ಕ್ಷೇತ್ರದ ಕೆಲಸದ ವಿಚಾರವಾಗಿ ಎಲ್ಲರ ಜತೆಗೂ ಚರ್ಚೆ ಮಾಡುತ್ತೇನೆ. ಪರಮೇಶ್ವರ್, ಮಹದೇವಪ್ಪ, ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ, ಜಮೀರ್, ಕೃಷ್ಣ ಭೈರೇಗೌಡ ದಿನೇಶ್ ಗುಂಡೂರಾವ್, ರಹೀಮ್ ಖಾನ್, ಹಾಗೂ ಸಿಎಂ ಸೇರಿ ಎಲ್ಲರನ್ನು ಭೇಟಿ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಕೆಲಸ ಕಾರ್ಯಕ್ಕಾಗಿ ಜನ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಸ್ಥಳೀಯವಾಗಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದಾಗ, ಮಂತ್ರಿಗಳ ಅವಶ್ಯಕತೆ ಬಿದ್ದಾಗ ಅವರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದರು.