ಬೆಳಗಾವಿ ಭಾಗದಲ್ಲಿ ಕನ್ನಡಿಗರ ಮೇಲೆ ಮರಾಠಿಗರು ಹಲ್ಲೆ ನಡೆಸಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನಗೊಂಡಿದೆ. ಬೆಳಗಾವಿ ಭಾಗದಲ್ಲಿ ಮರಾಠಿಗರ ದಬ್ಬಾಳಿಕೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದಾಗ್ಯೂ, ಅದೇ ದಿನ ನಿಗದಿಯಾಗಿರುವ 7, 8, 9ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶುಕ್ರವಾರ, ಬೆಂಗಳೂರಿನಲ್ಲಿ ಕನ್ನಡರ ಪರ ಸಂಘಟನೆಗಳು ಸಭೆ ನಡೆಸಿವೆ. ಮಾರ್ಚ್ 22ರಂದು ಕರ್ನಾಟಕ ಬಂದ್ ನಡೆಸಲು ನಿರ್ಧರಿಸಿವೆ. ವಾಟಾಳ್ ಪಕ್ಷ ನಾಯಕ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಬಂದ್‌ಗೆ ಕರೆಕೊಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಬಂದ್ ಹಿನ್ನೆಲೆ 7, 8 ಮತ್ತು 9ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಆದರೆ, ಪರೀಕ್ಷೆಗಳನ್ನು ಮುಂದೂಡುವುದಿಲ್ಲ. ಬಂದ್ ಇದ್ದರೂ ಪರೀಕ್ಷೆಗಳು ನಡೆಯಲಿವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
“ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸುವಂತೆ ಹೋರಾಟಗಾರರಿಗೆ ಮನವಿ ಮಾಡುತ್ತೇವೆ. ಮಕ್ಕಳು ಪರೀಕ್ಷೆ ಬರೆಯುವುದು ಬೇಡವೆಂದು ಹೋರಾಟಗಾರರು ಹೇಳುವುದಿಲ್ಲ. ವಿದ್ಯಾರ್ಥಿಗಳು ಗೊಂದಲ ಆಗುವುದು ಬೇಡ. ಈಗಾಗಲೇ ವೇಳಾಪಟ್ಟಿಯಲ್ಲಿ ಪ್ರಕಟಿಸಿರುವಂತೆ ಪರೀಕ್ಷೆಗಳು ನಡೆಯಲಿವೆ” ಎಂದು ಹೇಳಿದ್ದಾರೆ.