ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಅರಮನೆ ಮಂಡಳಿ ಉಪನಿರ್ದೇಶಕ ಮತ್ತು ಇತರ ಸಿಬ್ಬಂದಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಫೆ.25ರಂದು ಘಟನೆ ನಡೆದಿದ್ದು, ಇಂಡಿಯನ್ ಟಿವಿ ವರದಿಗಾರ ಕೆಂಡಗಣ್ಣ ಮತ್ತು ಕ್ಯಾಮರಾಮೆನ್ ರವಿ ಎಂ ಎಂಬವವರ ಮೇಲೆ ಹಲ್ಲೆ ಮಾಡಲಾಗಿದೆ. ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅವರಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಅರಮನೆ ಗೋಡೆ ಬಿರುಕು ಬಿಟ್ಟಿರುವ ಸಂಬಂಧ ಮಾಡಿದ್ದ ಸುದ್ದಿಗೆ ಪ್ರತಿಕ್ರಿಯೆ ಕೇಳಲು ತೆರಳಿದ್ದಾಗ ಸುಬ್ರಹ್ಮಣ್ಯ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಹಚರರಿಂದ ಹಲ್ಲೆ ಮಾಡಿಸಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಕ್ಯಾಮರಾಮನ್ ರವಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಟಿ.ಎಸ್. ಸುಬ್ರಹ್ಮಣ್ಯ, ಸಿಬ್ಬಂದಿ ಗಂಗಾಧರ ಸ್ವಾಮಿ, ಸಮರ್ಥ್ ಕೌಶಿಕ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರರ ಆದಾಯಕ್ಕೆ ಪೆಟ್ಟು
ಇನ್ನು ಘಟನೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರದಿಗಾರರನ್ನು ಇಷ್ಟು ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ ಎಂದರೆ ಸಾಮಾನ್ಯರ ಗತಿಯೇನು.. ಈ ರೀತಿ ಘಟನೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆದಿದ್ದು, ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
