ಭಾರತೀಯ ಸೇನೆಯು ಕಾಶ್ಮೀರದಲ್ಲಿ ಮನೆಗಳಿಗೆ ನುಗ್ಗಿ ಸ್ಥಳೀಯರ ಮೇಲೆ ಹಿಂಸೆ ಮಾಡುತ್ತಿದೆ ಎಂದು ಆರೋಪಿಸಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಶೋರಾ ಅವರು ಟ್ವೀಟ್ ಮಾಡಿದ್ದ ಕಾರಣಕ್ಕೆ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಪುರಸ್ಕರಿಸಿದೆ. ಶೆಹ್ಲಾ ರಶೀದ್ ಮೇಲಿನ ಪ್ರಕರಣ ಹಿಂಪಡೆಯಲು ಕೋರ್ಟ್ ಅಸ್ತು ಎಂದಿದೆ.
ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನೀಡಿದ್ದ ಅನುಮತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಹಿಂಪಡೆದಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಫೆಬ್ರವರಿ 27ರಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ಹಿಂದೆ ಎಡಪಂಥೀಯರ ‘ಎಕೋ ಚೇಂಬರ್’ನಲ್ಲಿದ್ದೆ: ಮೋದಿ ಪರವಾಗಿ ಒಲವು ತೋರಿದ ಶೆಹ್ಲಾ ರಶೀದ್ ಹೇಳಿಕೆ
ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರ ದೂರಿನ ಆಧಾರದಲ್ಲಿ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ರಶೀದ್ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
2019ರ ಆಗಸ್ಟ್ 18ರಂದು ಶೆಹ್ಲಾ ರಶೀದ್ ಸೇನೆ ವಿರುದ್ಧ ಆಗಿನ ಟ್ವಿಟ್ಟರ್‌ನಲ್ಲಿ (ಎಕ್ಸ್) ಪೋಸ್ಟ್ ಮಾಡಿದ್ದರು. “ಸಶಸ್ತ್ರ ಪಡೆಗಳು ರಾತ್ರಿಯಲ್ಲಿ ಮನೆಗಳಿಗೆ ಪ್ರವೇಶಿಸುತ್ತಿವೆ. ಯುವಕರನ್ನು ಎತ್ತೊಯ್ಯುತ್ತಿವೆ. ಮನೆಗಳಲ್ಲಿ ದರೋಡೆ ನಡೆಸುತ್ತಿವೆ. ಪಡಿತರವನ್ನು ಚೆಲ್ಲಾಡುತ್ತಿವೆ, ಅಕ್ಕಿಯೊಂದಿಗೆ ಎಣ್ಣೆ ಬೆರೆಸುತ್ತಿವೆ” ಎಂದು ಶೆಹ್ಲಾ ರಶೀದ್ ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ ಉಮರ್ ಖಾಲಿದ್
ಇನ್ನೊಂದು ಟ್ವೀಟ್‌ನಲ್ಲಿ, “ಶೋಪಿಯಾನ್‌ನಲ್ಲಿ, ನಾಲ್ಕು ಯುವಕರನ್ನು ಸೇನಾ ಶಿಬಿರಕ್ಕೆ ಕರೆಸಿ ವಿಚಾರಣೆ ಮಾಡಲಾಗಿದೆ. (ಚಿತ್ರಹಿಂಸೆ ನೀಡಲಾಗಿದೆ). ಇಡೀ ಪ್ರದೇಶಕ್ಕೆ ಅವರ ಕಿರುಚಾಟ ಕೇಳುವಂತೆ, ಎಲ್ಲರೂ ಭಯಭೀತರಾಗುವಂತೆ ಮಾಡಲು ಹತ್ತಿರವೇ ಮೈಕ್ ಇರಿಸಲಾಗಿತ್ತು. ಇದು ಇಡೀ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ” ಎಂದು ದೂರಿದ್ದಾರೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಸೇನೆಯು ಆರೋಪ ಆಧಾರರಹಿತ ಎಂದು ಹೇಳಿದೆ. ಹಾಗೆಯೇ ಶೆಹ್ಲಾ ರಶೀದ್ ವಿವಿಧ ಗುಂಪುಗಳ ನಡುವೆ ದ್ವೇಷ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿತ್ತು.
