ಇತ್ತೀಚೆಗೆ ಮುಕ್ತಾಯವಾದ ಮಹಾ ಕುಂಭಮೇಳ ವಿಚಾರದಲ್ಲಿ ಮಹಾರಾಷ್ಟ್ರದ ಆಡಳಿತರೂಢ ಶಿವಸೇನೆ (ಶಿಂದೆ ಬಣ) ಮತ್ತು ವಿರೋಧ ಪಕ್ಷ ಶಿವಸೇನೆ (ಯುಬಿಟಿ) ನಡುವೆ ತೀವ್ರ ವಾಗ್ವಾದ ನಡೆಯುತ್ತಿದೆ. ಮಹಾ ಕುಂಭಮೇಳಕ್ಕೆ ಹೋಗದ ವಿಪಕ್ಷ ನಾಯಕರುಗಳನ್ನು ಬಿಜೆಪಿ ಮತ್ತು ಎನ್‌ಡಿಎ ಕೂಟದ ಪಕ್ಷಗಳು ಟೀಕಿಸುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್, “ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಕುಂಭಮೇಳಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಕಳೆದ ವಾರ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಅದಕ್ಕೂ ಮುನ್ನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕುಟುಂಬಸಮೇತರಾಗಿ ಕುಂಭಮೇಳಕ್ಕೆ ತೆರಳಿ ಗಂಗಾ ನದಿಯಲ್ಲಿ ಮಿಂದೆದ್ದಿದ್ದರು. ಇವೆಲ್ಲವುದರ ನಡುವೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕುಂಭಮೇಳಕ್ಕೆ ಭೇಟಿ ನೀಡದಿರುವುದನ್ನು ಶಿಂದೆ ಟೀಕಿಸಿದ್ದರು.
ಇದನ್ನು ಓದಿದ್ದೀರಾ? ಬಾಲಾಸಾಹೇಬರ ಸಿದ್ಧಾಂತ ತ್ಯಜಿಸಿದವರ ಪಾಪ ತೊಳೆಯಲು ಕುಂಭಮೇಳಕ್ಕೆ ಹೋದೆ: ಉದ್ಧವ್‌ಗೆ ಶಿಂದೆ ತಿರುಗೇಟು
“ಮಹಾ ಕುಂಭಮೇಳಕ್ಕೆ ಭೇಟಿ ನೀಡದವರ ಬಳಿ ನಾವು ಯಾಕೆ ಈ ಪುಣ್ಯ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಕೇಳಬೇಕಾಗಿದೆ. ನಾವು ಹಿಂದೂಗಳು ಎಂದು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ. ಆದರೆ ಕುಂಭಮೇಳಕ್ಕೆ ಮಾತ್ರ ಹೋಗಿಲ್ಲ” ಎಂದು ಶಿಂದೆ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು “ಗಂಗಾ ನದಿಯಲ್ಲಿ ಮುಳುಗಿ ಏಳುವುದರಿಂದ ಮಹಾರಾಷ್ಟ್ರಕ್ಕೆ ದ್ರೋಹ ಬಗೆದ ಪಾಪ ಹೋಗುವುದಿಲ್ಲ” ಎಂದಿದ್ದರು. ಠಾಕ್ರೆ ಹೇಳಿಕೆಗೆ ಮತ್ತೆ ಶಿಂದೆ ಪ್ರತಿಕ್ರಿಯೆ ನೀಡಿದ್ದು, “ಶಿವಸೇನೆ ಸ್ಥಾಪಕ ಬಾಲಾಸಾಹೇಬ ಠಾಕ್ರೆ ಅವರ ಸಿದ್ಧಾಂತ ತ್ಯಜಿಸಿ ಪಾಪ ಮಾಡಿದವರ ಪಾಪವನ್ನು ತೊಳೆಯಲು ತಾನು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದೆ” ಎಂದರು.
ಹೀಗೆ ನಿರಂತರವಾಗಿ ಮುಂದುವರಿದ ವಾಕ್ಸಮರದ ನಡುವೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮಹಾ ಕುಂಭಮೇಳದ ವಿಚಾರದಲ್ಲಿ ರಾಜಕೀಯ ಪ್ರಚಾರ ಮಾಡುತ್ತಿರುವ ಆರ್‌ಎಸ್‌ಎಸ್ ನಾಯಕರು ತಬ್ಬಿಬ್ಬಾಗುವಂತೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದ ವಿಜಯಪುರದ ಇಬ್ಬರ ಸಾವು
“ಉದ್ಧವ್ ಠಾಕ್ರೆ, ಇತರೆ ನಾಯಕರು ಮಹಾ ಕುಂಭಮೇಳಕ್ಕೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸುವ ಶಿಂದೆ ಅವರು ಇದೇ ಪ್ರಶ್ನೆಯನ್ನು ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರನ್ನೂ ಕೂಡಾ ಕೇಳುವ ಧೈರ್ಯ ಹೊಂದಿರಬೇಕು. ಬಿಜೆಪಿಯ ‘ಬಾಸ್’ ಹಿಂದೂ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಸಂಗಮದಲ್ಲಿ ಆರ್‌ಎಸ್‌ಎಸ್ ನಾಯಕರು ಪವಿತ್ರ ಸ್ನಾನ ಮಾಡುವ ಚಿತ್ರವನ್ನು ನಾನು ನೋಡಿಲ್ಲ. ಕೇಶವ್ ಬಲಿರಾಮ್ ಹೆಗ್ಡೆವಾರ್, ಗುರು ಗೋಲ್ವಾಲ್ಕರ್, ಬಾಲಸಾಹೇಬ್, ರಜ್ಜು ಬೈಯ್ಯ, ಕೆ ಎಸ್ ಸುದರ್ಶನ್ ಅವರಂತಹ ಆರ್‌ಎಸ್‌ಎಸ್ ನಾಯಕರು ಪವಿತ್ರ ಸ್ನಾನ ಮಾಡಿರುವುದು ನಾನು ನೋಡಿಲ್ಲ. ವೀರ್ ಸಾವರ್ಕರ್ ಅಥವಾ ಬಾಲಸಾಹೇಬ್ ಠಾಕ್ರೆ ಅವರ ಚಿತ್ರವನ್ನು ನಾನು ಕುಂಭಮೇಳದಲ್ಲಿ ನೋಡಿಲ್ಲ” ಎಂದಿದ್ದಾರೆ.
