ವಿಜಯಪುರ ಜಿಲ್ಲೆಯ ತಿಡಗುಂದಿ ಸಮೀಪ 1,203 ಎಕರೆ ರೈತರ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವ ಯೋಜನೆಯನ್ನು ಇಲ್ಲಿಗೆ ಬೀಡಬೇಕು. ಇಲ್ಲವಾದಲ್ಲಿ 350 ಸದಸ್ಯರೊಡನೆ ತೀವ್ರ ಹೋರಾಟಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿತು.
ಜಿಲ್ಲಾಧಿಕಾರಿ ಮೂಲಕ ರಾಜ್ಯದ ಕೈಗಾರಿಕಾ ಸಚಿವ ಎಂ ಬಿ ಪಾಟೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು ಹಾಗೂ ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಜಿಲ್ಲೆಯ ನಾಗಠಾಣ ಹೋಬಳಿಯ ತಿಡಗುಂದಿ ವ್ಯಾಪ್ತಿಯ ಒಟ್ಟು 1,203 ಎಕರೆ ರೈತರ ಫಲವತ್ತಾದ ಕಪ್ಪು ಮಣ್ಣಿನ ಎರೆ ಜಮೀನುಗಳನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ತಯಾರಿ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಭಾಗದ ಯಾವ ರೈತರು ಕೂಡಾ ಈ ಬೆಲೆಬಾಳುವ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ಕೂಡಲೇ ಈ ಯೋಜನೆಯನ್ನು ಇಲ್ಲಿಗೆ ಕೈಬೀಡಬೇಕು” ಎಂದು ಒತ್ತಾಯಿಸಿದರು.
ಮುಖಂಡ ಗಿರೀಶ ತಾಳಿಕೋಟಿ ಮಾತನಾಡಿ, “ಸಚಿವ ಎಂ ಬಿ ಪಾಟೀಲರೇ ನಮ್ಮ ಭಾಗಕ್ಕೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪದವಿಧರರಾದ ನಾವೂಗಳು ಬೇರೆಕಡೆ ಕೆಲಸ ಮಾಡುವುದು ಬೇಡ. ನಮ್ಮ ಜಮೀನಿನಲ್ಲಿಯೇ ದುಡಿದು ಮಾಲೀಕರಾಗಿ ಇರೋಣ ಎನ್ನುವ ಆಸೆಯಿಂದ ನಮ್ಮ ಸ್ವಗ್ರಾಮಕ್ಕೆ ಬಂದು ವ್ಯವಸಾಯ ಮಾಡಿಕೊಂಡು ಸಂತೋಷದಿಂದ ಇದ್ದೇವೆ. ಆದರೆ ಈಗ ಏಕಾ-ಕೈಗಾರಿಕೆಗಾಗಿ ಒಳ್ಳೆಯ ಜಮೀನನ್ನು ಬಳಸಿಕೊಳ್ಳುವುದು ಯಾವ ನ್ಯಾಯ, ನಾವ್ಯಾರೂ ನಮ್ಮ ಭೂಮಿಯನ್ನು ಮಾರಿಕೊಳ್ಳಲ್ಲು ತಯಾರಿಲ್ಲ” ಎಂದರು.
ಹಿರಿಯರಾದ ಅಶೋಕ ಪಾಟೀಲ ಹಾಗೂ ಸಿದ್ದರಾಮ ತಿಲ್ಯಾಳ ಮಾತನಾಡಿ, “ಜಿಲ್ಲೆಯಲ್ಲಿ ಈ ಮುಂಚೆ ಬೇರೆ ಬೇರೆ ಉದ್ದೇಶಕ್ಕಾಗಿ ನಿಗದಿ ಮಾಡಿರುವ ಭೂಮಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ನಂತರದಲ್ಲಿ ಹೊಸ ಹೊಸ ಯೋಜನೆಗಳಿಗೆ ಕೈಹಾಕಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್
ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ಸಂಗಪ್ಪಟಕ್ಕೆ, ಜಕರಾಯ ಪೂಜಾರಿ, ಮುಖಂಡ ಭೀರಪ್ಪ ಬಿಜ್ಜರಗಿ, ಅಶೋಕಗೌಡ ಬಿರಾದಾರ, ಮಡಿವಾಳ ತಿಲ್ಯಾಳ, ಗೋಪಾಲ ಭೋಸಲೆ, ಗೌಸಪಾಕ್ ವಾಲಿಕಾರ, ಅಶೋಕ ಪಾಟೀಲ, ಚನ್ನಪ್ಪಗೋಟೆ, ಗೌಡಪ್ಪ ಬಿರಾದಾರ, ಶ್ರೀಶೈಲ ನಾವಿ, ಮಹೇಶ ನಾಟಿಕಾರ, ಚಿದಾನಂದಕಟ್ಟಿಮನಿ, ಅಂಜನಾ ತಿಲ್ಯಾಳ, ನೀಲವ್ವ ಬಿಜ್ಜರಗಿ, ಪ್ರದೀಪ ಚಲವಾದಿ, ಪರಶುರಾಮ ಹತ್ತಿ, ಮಲ್ಲಿಕಾರ್ಜುನಕಟ್ಟಿಮನಿ, ಶ್ರೀಶೈಲ ನಾವಿ, ಶಿವಪ್ಪ ಪೂಜಾರಿ, ನೀಲಮ್ಮಜಂಬಗಿ, ಶ್ರೀದೇವಿ ಹೂಗಾರ, ಶಾಂತಾದರ್ಗಾ, ನೀಲವ್ವ ಬಿಜಾಪುರ ಸೇರಿದಂತೆ ಸುಮಾರು 350 ಕುಟುಂಬ ಸದಸ್ಯರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.