ರಾಜ್ಯದ ಕಾರ್ಮಿಕ ವರ್ಗದ ಪ್ರಮುಖ ಪ್ರಶ್ನೆಗಳನ್ನು ಇತ್ಯರ್ಥ ಮಾಡಲು, ಜನಪರ ಪರ್ಯಾಯ ಆರ್ಥಿಕ ನೀತಿಗಳ ಜಾರಿಗೆ ಒತ್ತಾಯಿಸಿ ಮಾರ್ಚ್ 3ರಿಂದ 7ರವರೆಗೆ ಸಾಮೂಹಿಕ ಮತ ಪ್ರದರ್ಶನ ನಡೆಸಲು ಸಿಐಟಿಯು ರಾಜ್ಯಸಮಿತಿಯು ತೀರ್ಮಾನಿಸಿದೆ ಎಂದು ಸಿಐಟಿಯು ವಿಜಯಪುರ ಜಿಲ್ಲಾ ಮುಖಂಡ ಲಕ್ಷ್ಮಣ ಹಂದ್ರಾಳಾ ತಿಳಿಸಿದರು.
ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಹಾಗೂ ಮಾರ್ಚ್ 7ರಂದು ಅಂಗನವಾಡಿ ಕಾರ್ಮಿಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ” ಎಂದುರು.
ಕರ್ನಾಟಕ ರಾಜ್ಯದ ಕಾರ್ಮಿಕರ ಹಲವು ಪ್ರಮುಖ ಬೇಡಿಕೆಗಳು ದೀರ್ಘ ಕಾಲದಿಂದ ಇತ್ಯರ್ಥವಾಗದೆ ಉಳಿದಿವೆ. ಶ್ರಮಶಕ್ತಿಯ ಸಮರ್ಪಕ ನಿರ್ವಹಣೆ ಹಾಗೂ ಶ್ರಮಿಕರನ್ನು ಮಾರುಕಟ್ಟೆಯ ಚಟುವಟಿಕೆಗಳಲ್ಲಿ ಸಕ್ರಿಯ ಪಾಲು ವಹಿಸುವಂತೆ ಮಾಡಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವ ಅಗತ್ಯವಿದೆ” ಎಂದರು.
“ರಾಜ್ಯ ಸರ್ಕಾರವು ಪ್ರಗತಿಶೀಲ ಹಾಗೂ ಬಹು ಸಂಖ್ಯೆಯಲ್ಲಿನ ಶ್ರಮ ಜೀವಿಗಳನ್ನು ಒಳಗೊಳ್ಳುವ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತದೆಂಬ ರಾಜ್ಯದ ಕಾರ್ಮಿಕರ ನಿರೀಕ್ಷೆಯು ಲೋಕಸಭಾ ಚುನಾವಣೆಗಳ ನಂತರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಹುಸಿಯಾಗುತ್ತಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಆರ್ಥಿಕ ನೆರವನ್ನು ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ” ಎಂದು ಟೀಕೆ ಮಾಡಿದರು.
“ಫಲವತ್ತಾದ ರೈತರ ಭೂಮಿಯನ್ನು ಒತ್ತಾಯಪೂರ್ವಕವಾಗಿ ಸ್ವಾಧೀನ ಮಾಡಿ ಕಾರ್ಪೊರೇಟ್ ಹಾಗೂ ಭೂಮಾಪಯಗಳ ವಶಕ್ಕೆ ಒಪ್ಪಿಸುವ ಭೂಸ್ವಾಧೀನ ನೀತಿಗಳನ್ನು ಮುಂದುವರೆಸುತ್ತಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಾರ್ಮಿಕ ಕಾನೂನುಗಳಲ್ಲಿ ಜಾರಿಗೆ ಮಾಡಿದ ಮಾರಕ ತಿದ್ದುಪಡಿಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಂದುವರೆಸುತ್ತಿದೆ” ಎಂದರು.
“ಕೃಷಿ ಕ್ಷೇತ್ರದಲ್ಲಿಯೂ ಎಪಿಎಂಸಿ ಕಾಯ್ದೆಗಳಲ್ಲಿ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ರೈತ ವಿರೋಧಿ ತಿದ್ದುಪಡಿಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯದೆ ಜನರಿಗೆ ನೀಡಿದ ಭರವಸೆಗಳನ್ನು ಹುಸಿ ಮಾಡಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಫಲವತ್ತಾದ ಕೃಷಿಭೂಮಿ ಕೈಗಾರಿಕಾ ಉದ್ದೇಶಕ್ಕೆ ಬಳಸಿದರೆ ಹೋರಾಟಕ್ಕೆ ಸಿದ್ಧ: ರೈತ ಸಂಘ
“ದುಡಿಯುವ ಜನರ ಹಕ್ಕುಗಳನ್ನು ನಾಶಮಾಡುವ ಬಂಡವಾಳ ವರ್ಗಗಳ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಅಲ್ಲದೆ ಸಂಘಟಿತ, ಅಸಂಘಟಿತ, ಪತ್ರಿಕಾ ಉದ್ಯಮದ, ಗಿಗ್, ಗುತ್ತಿಗೆ ಹಾಗೂ ಕಾಯಮೇತರ ಕಾರ್ಮಿಕರ ವಿವಿಧ ಬೇಡಿಕೆಗಳು, ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಮಿಕರ ಬೇಡಿಕೆಗಳು, ರೈತರಿಗೆ ಬೆಂಬಲ ಬೆಲೆ ಸೇರಿದಂತೆ ಕೃಷಿ ರಂಗದ ಬೇಡಿಕೆಗಳು ಶಿಕ್ಷಣವನ್ನು ಖಾಸಗಿಕರಣ ಮಾಡುವ ಮೂಲಕ ದುಬಾರಿ ಮಾಡುವ ಹೊಸ ಶಿಕ್ಷಣ ನೀತಿಗಳ ವಿರೋಧಿಸುವ ಹಾಗೂ ಜನಪರ ಶಿಕ್ಷಣ ನೀತಿಗಳ ಜಾರಿಯ ಬೇಡಿಕೆಗಳನ್ನು ಒಳಗೊಂಡಂತೆ 37 ಬೇಡಿಗಳನ್ನು ಹೊಂದಿದ್ದು, ಈ ಅಹೋರಾತ್ರಿ ಮತ ಪ್ರದರ್ಶನವನ್ನು ನಡೆಸಲು ಸಿಐಟಿಯು ರಾಜ್ಯಸಮಿತಿ ತೀರ್ಮಾನದ ಮೇರೆಗೆ ವಿಜಯಪುರ ಜಿಲ್ಲೆಯ ಕಾರ್ಮಿಕರು ಬೆಂಬಲಿಸಿ ಭಾಗವಹಿಸಲು ತೀರ್ಮಾನಿಸಿದ್ದಾರೆ” ಎಂದು ಹಂದ್ರಾಳ ತಿಳಿಸಿದ್ದಾರೆ.
