2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಾಧನೆಯನ್ನು ಮಾಡಬೇಕಾದರೆ ಭಾರತೀಯರು ಅಧಿಕ ಶ್ರಮ ಅಗತ್ಯವಾಗಿದೆ. ನಾನು ಪರಿಶ್ರಮಪಟ್ಟು ಕೆಲಸ ಮಾಡುವುದರ ಮೇಲೆ ನಂಬಿಕೆ ಹೊಂದಿದ್ದೇನೆ. ವಾರಕ್ಕೆ 80 ಗಂಟೆಯಾಗಲಿ ಅಥವಾ 90 ಗಂಟೆಯಾಗಲಿ ಭಾರತೀಯರು ಕಠಿಣ ಶ್ರಮಪಡುವುದು ಅಗತ್ಯವಾಗಿದೆ” ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ ಜನರ ಅದರಲ್ಲೂ ಮುಖ್ಯವಾಗಿ ಯುವಕರ ಉದ್ಯೋಗವಧಿ ಬಗ್ಗೆ ಅಧಿಕ ಚರ್ಚೆ ನಡೆಯುತ್ತಿದೆ. ಕೆಲವು ಕಾರ್ಪೋರೇಟ್ ಸಂಸ್ಥೆಗಳ ಮಾಲೀಕರುಗಳು ಯುವಕರು ವಾರಕ್ಕೆ 70 ಗಂಟೆ, 90 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಗಳನ್ನು ನೀಡಿ ತೀವ್ರ ವಾಗ್ದಾಳಿಗೆ ಗುರಿಯಾಗಿದ್ದಾರೆ. ಇವೆಲ್ಲವುದರ ನಡುವೆ ಇದೀಗ ನೀತಿ ಆಯೋಗದ ಮಾಜಿ ಸಿಇಒ ಕೂಡಾ ವಾರಕ್ಕೆ 80-90 ಗಂಟೆಗಳು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿ ಕಾರ್ಮಿಕ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನು ಓದಿದ್ದೀರಾ? 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
“ಪ್ರಬಲವಾದ ಉದ್ಯೋಗ ನೀತಿಯಿಂದಾಗಿ ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಆರ್ಥಿಕವಾಗಿ ಯಶಸ್ಸು ಕಂಡಿದೆ. ಭಾರತವೂ ಇದೇ ರೀತಿಯ ಮನಸ್ಥಿತಿ ಬೆಳೆಸುವ ಅಗತ್ಯವಿದೆ. ವಾರಕ್ಕೆ 80 ಆಗಲಿ ಅಥವಾ 90 ಗಂಟೆಯಾಗಲಿ ಭಾರತೀಯರು ಪರಿಶ್ರಮಪಟ್ಟು ಕೆಲಸ ಮಾಡಬೇಕು. 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಬೆಳೆಯುವುದು ನಿಮ್ಮ ಗುರಿಯಾಗಿದ್ದರೆ, ಮನರಂಜನೆ ಅಥವಾ ಸಿನಿಮಾ ಸ್ಟಾರ್‌ಗಳನ್ನು ಫಾಲೋ ಮಾಡುವುದರಿಂದ ಸಾಧಿಸಲು ಸಾಧ್ಯವಿಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಭಾರತವು 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ. ಆದರೆ ಆ ಗುರಿ ತಲುಪಲು ಯುವಕರು ಮಿಷನ್‌ನಂತೆ ಕೆಲಸ ಮಾಡುವ ಅಗತ್ಯವಿದೆ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ಅಮಿತಾಬ್ ಕಾಂತ್ ನೀಡಿದ್ದಾರೆ. ಈ ಗುರಿಯನ್ನು ತಲುಪಲು ಸರ್ಕಾರ ಯುವಕರ ಮೇಲೆ ಹೆಚ್ಚು ಒತ್ತಡ ಹೇರುವ, ಉದ್ಯೋಗ ಅವಧಿ ಹೆಚ್ಚಿಸುವಂತಹ ನೀತಿ ಜಾರಿ ಮಾಡುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? 70, 90 ಗಂಟೆ ಬಿಡಿ ವಾರಕ್ಕೆ 120 ಗಂಟೆ ಕೆಲಸ ಮಾಡಿ ಎಂದ ಎಲಾನ್ ಮಸ್ಕ್
ಇನ್ನು ಉದ್ಯೋಗ ಮತ್ತು ವೈಯಕ್ತಿಕ ಜೀವನದ ಸಮತೋಲನ ಬಗ್ಗೆ ಮಾತನಾಡಿದ ಅವರು, “ನಾನು ಪ್ರತಿದಿನ ಕೆಲಸ ಮಾಡುತ್ತೇನೆ, ವ್ಯಾಯಾಮ ಮಾಡುತ್ತೇನೆ. ಗೋಲ್ಫ್ ಆಟವಾಡುತ್ತೇನೆ. ಇವೆಲ್ಲವೂ ಮಾಡಿದರೂ ನಾನು ಅಧಿಕ ಕೆಲಸ ಮಾಡುತ್ತೇನೆ. ನಿಮಗಾಗಿ ದಿನಕ್ಕೆ ಒಂದುವರೆ ಗಂಟೆ ಇರಿಸಿ. ಅದನ್ನು ಬಿಟ್ಟು ಇನ್ನೂ 22.5 ಗಂಟೆ ಇರುತ್ತದೆ. ನಿಮ್ಮ ವೈಯಕ್ತಿಕ ಜೀವನ, ಉದ್ಯೋಗ ಜೀವನದ ಸಮತೋಲನ ಕಾಯ್ದುಕೊಳ್ಳಲು ಇಷ್ಟೊಂದು ಸಮಯ ಸಾಕಾಗುತ್ತದೆ. ಜನರು ಅತೀ ಅಧಿಕ ಕೆಲಸ ಮಾಡಬಾರದು ಎಂದು ಹೇಳುವುದನ್ನೇ ಫ್ಯಾಷನ್ ಮಾಡಿಕೊಳ್ಳಬೇಡಿ” ಎಂದರು.
ಈ ಹಿಂದೆ ಎಲ್&ಟಿ ಅಧ್ಯಕ್ಷ ಎಸ್ ಎನ್ ಸುಬ್ರಹ್ಮಣ್ಯ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು, ಭಾನುವಾರವೂ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೂ ಮುನ್ನ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ದಿನ ಕೆಲಸ ಮಾಡಬೇಕು ಎಂದು ಹೇಳಿ, ತನ್ನ ಹೇಳಿಕೆಯನ್ನು ಪದೇ ಪದೇ ಸಮರ್ಥಿಸಿಕೊಂಡು ವಿವಾದದಲ್ಲಿ ಸಿಲುಕಿದ್ದರು.
