ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಧನ್ವಂತರಿ ವನ, ಪಾರಂಪರಿಕ ವೈದ್ಯ ಪರಿಷತ್ ಭವನ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ್ ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿದ್ಯ ಮಂಡಳಿ, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಬೀದರ್ ನಗರದಲ್ಲಿ ಏರ್ಪಡಿಸಿದ್ದ 3 ದಿನಗಳ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪ್ರಥಮ ಬಾರಿಗೆ ಬೃಹತ್ ಪ್ರಮಾಣದಲ್ಲಿ ಇಂತಹ ಸಮ್ಮೇಳನವನ್ನು ನಡೆಸುತ್ತಿದೆ. ವೈದ್ಯ ಪರಿಷತ್ ಪದಾಧಿಕಾರಿಗಳು ನೀಡಿದ ಬೇಡಿಕೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪಾರಂಪರಿಕ ವೈದ್ಯ ಸಮ್ಮೇಳನಕ್ಕೆ ಅನುದಾನ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.
ʼರಾಜ್ಯದ ಎಲ್ಲ ಔಷಧೀಯ ಸಸ್ಯಗಳನ್ನು ದಾಖಲಿಸಿ ಮನಕುಲದ ಒಳತಿಗಾಗಿ ಉಪಯೋಗಿಸುವ ಹಿನ್ನೆಲೆಯಲ್ಲಿ ಜೀವ ವೈವಿದ್ಯತೆ ಮಂಡಳಿಯ ವಿವಿಧ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಔಷಧೀಯ ಸಸ್ಯಗಳನ್ನು ದಾಖಲೀಕರಿಸಲಾಗಿದೆʼ ಎಂದರು.

ʼಅರಣ್ಯ ಇಲಾಖೆಯಿಂದ ಎರಡು ವರ್ಷಗಳಲ್ಲಿ ಒಟ್ಟು 9 ಕೋಟಿ ಸಸಿಗಳನ್ನು ನೆಡಲಾಗಿದೆ. ಅರಣ್ಯ ಬ್ಲಾಕ್‍ಗಳಲ್ಲಿ ಕಂದಾಯ ಹಾಗೂ ರೈತರ ಜಮೀನುಗಳಲ್ಲಿ, ರಸ್ತೆ ಬದಿಗಳಲ್ಲಿ ಗಿಡ ಮರಗಳನ್ನು ಬೆಳೆಸಲಾಗುತ್ತಿದೆ ʼ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ʼಇತ್ತೀಚಿನ ದಿನಮಾನಗಳಲ್ಲಿ ಹವಾಮಾನ ಬದಲಾವಣೆಯಿಂದ ಪ್ರಕೃತಿ ವಿಕೋಪ, ಸುನಾಮಿ, ಬರ, ಗುಡ್ಡ ಕುಸಿತ, ತಾಪಮಾನ ಹೆಚ್ಚಳದಂತಹ ಘಟನೆಗಳನ್ನು ಕಾಣುತ್ತಿದೆ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಗಿಡ ನೆಡುವುದು, ಗಿಡ ಮರಗಳನ್ನು ಸಂರಕ್ಷಿಸುವುದು ದಿನನಿತ್ಯದ ಕಾಯಕವಾಗಬೇಕುʼ ಎಂದು ತಿಳಿಸಿದರು.
ʼನೂರಾರು ವರ್ಷಗಳಿಂದ ಪಾರಂಪರಿಕವಾಗಿ ಹರಿದು ಬಂದಿರುವ ಈ ಪಾರಂಪರಿಕ ವೈದ್ಯಕೀಯ ಜ್ಞಾನವನ್ನು ಉಳಿಸಿ ಬೆಳೆಸಬೇಕಾಗಿದೆ. ಅನೇಕ ರೋಗಗಳಿಗೆ ಪಾರಂಪರಿಕ ವೈದ್ಯ ಪದ್ಧತಿ ಸಿದ್ಧ ಔಷಧಿಯಾಗಿದೆ. ಕರ್ನಾಟಕ ರಾಜ್ಯವು ಔಷಧೀಯ ಸಸ್ಯಗಳ ಶ್ರೀಮಂತ ಆಗರವಾಗಿದೆ. ಇದನ್ನು ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ತಿಳಿಸಿದರು.
‘ಆಧುನಿಕ ಚಿಕಿತ್ಸಾ ಪದ್ಧತಿ ಅಲೋಪಥೀಕ್ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಅನೇಕ ರೋಗಗಳನ್ನು ನಿವಾರಿಸಲಾಗುತ್ತಿದೆ. ಇದರಿಂದ ಅಡ್ಡ ಪರಿಣಾಮ ಕಂಡುಬರುತ್ತವೆ. ಆದರೆ ಪಾರಂಪರಿಕ ಔಷಧೀಯ ಸಸ್ಯಗಳಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಪಾರ್ಶ್ವವಾಯು ಹಾಗೂ ಅಸ್ತಮ ರೋಗಗಳಿಗೆ ಈಗಲೂ ಸಾಕಷ್ಟು ಜನರು ಆರ್ಯುವೇದಿಕ್ ಔಷಧಿಗಳ ಆಶ್ರಯವಾಗಿದ್ದಾರೆʼ ಎಂದರು.

ಸಾನಿದ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼ12ನೇ ಶತಮಾನದ ವೈದ್ಯ ಸಂಗಣ್ಣನವರು ಪಾರಂಪರಿಕ ಔಷಧೀಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಈ ಕುರಿತಂತೆ ಹಲವಾರು ವಚನಗಳನ್ನು ಬರೆದಿದ್ದಾರೆʼ ಎಂದರು.
ʼಯಾವುದಾದರೂ ರೋಗ ಬಂದಲ್ಲಿ ಶಿವಾರ್ಚನೆಯ ಬೇಡಿಕೊಳ್ಳುವೆಂದು ಇಷ್ಟಲಿಂಗ ಶಿವಯೋಗ ಮಾಡಿಕೊಳ್ಳಬೇಕೆಂದು ವೈದ್ಯ ಸಂಗಣ್ಣ ತಿಳಿಸಿದ್ದಾರೆ. ಇಷ್ಟಲಿಂಗದಲ್ಲಿ ಅನೇಕ ಗಿಡಮೂಲಿಕೆಗಳ ರಸ ಹಾಕುವುದರಿಂದ ರೋಗ ನಿವಾರಣೆಗೆ ಸಹಾಯವಾಗುತ್ತದೆ. ಶರಣ ವೈದ್ಯ ಸಂಗಣ್ಣನವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕುʼ ಎಂದು ಹೇಳಿದರು.
ಜೀವ ವೈವಿಧ್ಯ ಮಂಡಳಿಯಿಂದ ನೀಡಲಾಗುವ ಅತ್ಯುತ್ತಮ ಜೀವ ವೈವಿಧ್ಯ ನಿರ್ವಹಣಾ ಪ್ರಶಸ್ತಿಯನ್ನು ಉಡುಪಿಯ ಆಶಾ, ಅತ್ಯುತ್ತಮ ಸಾವಯವ ಕೃಷಿ ಪದ್ಧತಿಗಾಗಿ ಮಂಡ್ಯದ ಬಿ.ರಾಮಲಿಂಗಯ್ಯ ಹಾಗೂ ಅತ್ಯುತ್ತಮ ಜೀವ ವೈವಿಧ್ಯ ಸಂರಕ್ಷಣೆ ಪ್ರಶಸ್ತಿಯನ್ನು ಶಿವಮೊಗ್ಗದ ಚಕ್ರವತ ಸುಬ್ರಮಣ್ಯ ಅವರಿಗೆ ಸಚಿವ ಈಶ್ವರ ಖಂಡ್ರೆ ಅವರು ತಲಾ ₹50 ಸಾವಿರ ನಗದು ಹಾಗೂ ಪ್ರಮಾಣ ಪತ್ರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿದ ದುರುಳ ಪೊಲೀಸರ ಬಲೆಗೆ
ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಪಾರಂಪರಿಕ ವೈದ್ಯ ಪರಿಷತ್ ಗೌರವಾಧ್ಯಕ್ಷ ನಾಗಿದೇವ ಶರಣರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಗತ್‌ರಾಮ, ಕಲಬುರಗಿ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನವಾರ, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಅಧ್ಯಕ್ಷ ಜಿ.ಮಹಾದೇವಯ್ಯ, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತನ ಅಧ್ಯಕ್ಷ ಆನಂದ ವಿ.ಹೆರೂರ, ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ, ಪ್ರೊ.ಜಗನ್ನಾಥ ಹೆಬ್ಬಾಳೆ, ಪ್ರೊ.ಎಸ್.ವಿ.ಕಲ್ಮಟ್, ರಾಜಕುಮಾರ ಹೆಬ್ಬಾಳೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪಾರಂಪರಿಕ ವೈದ್ಯರು, ವಿವಿಧ ಸಮಿತಿಗಳ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.