ಶತಮಾನಗಳಿಂದ ಕತ್ತಲು ತುಂಬಿದ್ದ ಚಾಮರಾಜನಗರ ಜಿಲ್ಲೆಯ ಹಾಡಿಗಳಿಗೆ ಬೆಳಕು ನೀಡುವ ಯೋಜನೆ ಸಾಕಾರಗೊಳ್ಳುತ್ತಿದ್ದು, ಮೊದಲಿಗೆ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಾಲಾರ್ ಹಾಡಿಗಳಿಗೆ ಬೆಳಕು ಸಿಕ್ಕಿದೆ. ವಿದ್ಯುತ್ ಸಂಪರ್ಕಕ್ಕೆ ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಚಾಲನೆ ನೀಡಿದರು.
ಜಿಲ್ಲೆಯ 31 ಹಾಡಿಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಕಳೆದ ನವೆಂಬರ್ 30 ರಂದು ಚಾಲನೆ ನೀಡಲಾಗಿತ್ತು. ಮೂರು ತಿಂಗಳಿನಲ್ಲಿಯೇ ಯೋಜನೆಯ ಮೊದಲ ಹಂತದಲ್ಲಿ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಅತ್ಯಂತ ಚಾಲನೆ ದೊರೆತಿದೆ. ಒಟ್ಟು 31 ಹಾಡಿಗಳಿಗೆ 42 ಕೋಟಿ ರೂ ವೆಚ್ಚದಲ್ಲಿ 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಐತಿಹಾಸಿಕ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಇದಕ್ಕೆ ಸಾಕ್ಷಿಯಾಗಿ ಪಾಲಾರ್ ಹಾಡಿ ಬೆಳಕು ಕಂಡಿದೆ.
ಪಾಲಾರ್ ಹಾಡಿಯ ಮಾದಮ್ಮ ಅವರ ಮನೆಯಲ್ಲಿ ವಿದ್ಯುತ್ ಗುಂಡಿಯನ್ನು ಒತ್ತುವ ಮೂಲಕ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ವಿದ್ಯುತ್ ಸಂಪರ್ಕ ಯೋಜನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ” ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಹಾಡಿ, ಪೋಡುಗಳ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಿದ್ದರು. ನಾನು ಸಹ ಬೆಟ್ಟಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಸ್ಥಳೀಯ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಜನರಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ನಿರ್ಧಾರವನ್ನು ಸರ್ಕಾರ ಕೈಗೊಂಡು ಅದರಂತೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದು ಯಶಸ್ವಿಯಾಗಿ ಪಾಲಾರ್‍ನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ” ಎಂದರು.

” ಜಿಲ್ಲೆಯ ಎಲ್ಲಾ 31 ಹಾಡಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಿದ್ದು, ಕಾಮಗಾರಿ ನಡೆಯುತಿದೆ, 2 ರಿಂದ 3 ತಿಂಗಳಲ್ಲಿ ಸಂಪೂರ್ಣವಾಗಿ ಎಲ್ಲಾ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಪೂರ್ಣವಾಗಲಿದೆ. ಯೋಜನೆ ಜಾರಿಗೆ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಅಧಿಕಾರಿಗಳು ಕಾರಣರಾಗಿದ್ದಾರೆ. 12 ಕೋಟಿ ರೂ ವೆಚ್ಚದಲ್ಲಿ ಹಾಡಿಗಳಲ್ಲಿ 123 ಕಿಮೀ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕಾರ್ಯವು ಶೀಘ್ರದಲ್ಲಿಯೇ ಆಗಲಿದೆ. ಹಾಡಿ, ಪೋಡುಗಳ ಅರಣ್ಯವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಶಾಶ್ವತ ವಿದ್ಯುತ್ ಒದಗಿಸುವ ಕಾರ್ಯ ನೆರವೇರಿರುವುದರಿಂದ ನಾವು ಮಾಡಿದ ಕೆಲಸ ಸಾರ್ಥಕ ಎನಿಸಿದೆ. ಜನರ ಅಗತ್ಯಗಳಿಗೆ ಎಲ್ಲಾ ರೀತಿಯ ಸ್ಪಂದನೆ ಸಿಗಲಿದೆ ” ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಮಾತನಾಡಿ ” ಅರಣ್ಯ ವಾಸಿಗಳು, ಕಾಡಂಚಿನ ಜನರು, ಎಲ್ಲಾ ವರ್ಗದ ಬಡವರ ಮುಖದಲ್ಲಿ ನಗು ಕಾಣಬೇಕು. ಅವರಿಗೆ ಪೂರಕವಾಗಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಅವಶ್ಯಕ ಕ್ರಮಗಳಿಗೆ ಅದ್ಯತೆ ನೀಡಿದೆ.ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಐತಿಹಾಸಿಕ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಇಂದು ಪಾಲಾರ್‍ನಲ್ಲಿ ಜಾರಿ ಮಾಡಿದ್ದೇವೆ. ಪಾಲಾರ್ ಹಾಡಿಯ 75 ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಅಂಡರ್ ಗ್ರೌಂಡ್ ಕೇಬಲ್ ಮೂಲಕ ಸುರಕ್ಷಿತವಾಗಿ ಅಳವಡಿಸಲಾಗಿದೆ. ಕಾಡಿನ ಸಂರಕ್ಷಣೆ ಮಾಡುವ ಅರಣ್ಯ ವಾಸಿಗಳಿಗೆ ಎಲ್ಲಾ ಸವಲತ್ತುಗಳನ್ನು ತಲುಪಿಸುವುದು ಸರ್ಕಾರದ ದೃಢ ಸಂಕಲ್ಪವಾಗಿದೆ ” ಎಂದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿ ಸಿದ್ದೇಗೌಡ ಮಾತನಾಡಿ ‘ ಹಾಡಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಯೋಜನೆ ಅನುಷ್ಠಾನವಾಗುತ್ತಿರುವುದು ಇಡೀ ರಾಜ್ಯ, ದೇಶದಲ್ಲಿಯೇ ಚಾಮರಾಜನಗರ ಜಿಲ್ಲೆ ಪ್ರಥಮವಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ ‘ ಎಂದರು.

ಶಾಸಕರಾದ ಎಂ ಆರ್ ಮಂಜುನಾಥ್ ಮಾತನಾಡಿ ” ಹಾಡಿಗಳಿಗೆ ವಿದ್ಯುತ್ ಕಲ್ಪಿಸಿರುವುದು ಅತ್ಯಂತ ಸ್ಮರಣೀಯ ದಿನವಾಗಿದೆ. ಅರಣ್ಯ ವಾಸಿಗಳಿಗೆ ಬೆಳಕು ಕೊಡುವ ಮಹತ್ತರ ಕಾರ್ಯ ನೆರವೇರಿರುವುದು ನನಗೆ ಅತೀವ ಸಂತಸವಾಗಿದೆ. ರಸ್ತೆಗಳ ನಿರ್ಮಾಣ ಕಾರ್ಯವು ಸಹ ಶೀಘ್ರವಾಗಿ ನೇರವೇರಲೆಂದು ಆಶಿಸುವುದಾಗಿ” ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸುಶಿಕ್ಷಿತ ಸಮಾಜ ನಿರ್ಮಾಣದಿಂದ ಬಾಲ್ಯ ವಿವಾಹ ನಿರ್ಮೂಲನೆ ಸಾಧ್ಯ : ನ್ಯಾ. ಸೋಮಶೇಖರ್ ಅಭಿಮತ
ಶಾಸಕರಾದ ಎ ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನಿರಾಜ್ ಗೋಪಾಲ್, ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಶೀಲ, ಉಪವಿಭಾಗಾಧಿಕಾರಿ ಮಹೇಶ್, ನಿಗಮದ ಹಿರಿಯ ಎಂಜಿನಿಯರ್ ದಿವಾಕರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ವರ್, ತಹಶೀಲ್ದಾರ್ ಗುರುಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಸೇರಿದಂತೆ ಹಲವರು ಇದ್ದರು.
