ಈ ಬಾರಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ದಾಖಲೆ ಬರೆದಿದೆ. ಲೀಗ್‌ನಲ್ಲಿ ನಡೆದ ಎಲ್ಲ ಮೂರು ಪಂದ್ಯಗಳನ್ನು ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ದುಬೈನಲ್ಲಿ ಬಾಂಗ್ಲಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ್ದ ಭಾರತ ಪಾಕಿಸ್ತಾನದ ವಿರುದ್ಧವೂ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಈಗ ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿದೆ.
ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಮೊದಲ ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಡೆದರೆ ಬುಧವಾರ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮಧ್ಯೆ ಎರಡನೇ ಸೆಮಿಫೈನಲ್ ನಡೆಯಲಿದೆ. ಭಾನುವಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದೆ. 2000 ರಲ್ಲಿ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ತಂಡಕ್ಕೆ 4 ವಿಕೆಟ್‌ಗಳ ಸೋಲುಣಿಸಿ ನ್ಯೂಜಿಲೆಂಡ್ ಟ್ರೋಫಿ ಎತ್ತಿ ಹಿಡಿದಿತ್ತು.
ಈ ಸುದ್ದಿ ಓದಿದ್ದೀರಾ? ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್: ಟಾಪ್-10 ನಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು
ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಪಡೆಯನ್ನು ಸೋಲಿಸಲು ಟೀಮ್ ಇಂಡಿಯಾಗೆ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಭಾರತೀಯ ಪಡೆ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದಿದೆ. ಈ ಮೂಲಕ 2 ದಶಕಗಳ ಹಳೆಯ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಇನ್ನು ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡ ಮುಖಾಮುಖಿಯಾದರೆ, ಮಾರ್ಚ್ 5 ರಂದು ಜರುಗಲಿರುವ ಎರಡನೇ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿದೆ.
ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಶ್ರೇಯಸ್ ಅಯ್ಯರ್ 77 ರನ್‌ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ 45 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಬಾರಿಸಿದರು.
250 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಈ ಬಾರಿ ಕೂಡ ಭಾರತಕ್ಕೆ ಸೋಲುಣಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
10 ಓವರ್ಗಳಲ್ಲಿ ಕೇವಲ 42 ರನ್ ನೀಡಿದ ವರುಣ್ ಚಕ್ರವರ್ತಿ 5 ಪ್ರಮುಖ ವಿಕೆಟ್ ಕಬಳಿಸಿದರು. ಪರಿಣಾಮ 45.3 ಓವರ್ಗಳಲ್ಲಿ 205 ರನ್ಗಳಿಸಿ ನ್ಯೂಜಿಲೆಂಡ್ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ.