ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಪುಣ್ಯಸ್ನಾನ ಮುಗಿಸಿಕೊಂಡು ಹಿಂತಿರುಗುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೀದರ್ ತಾಲ್ಲೂಕಿನ ಜನವಾಡ ಗ್ರಾಮದ ದಿಲೀಪ್ ಕಾಳೇಕರ್ (62) ಮೃತರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.
ಬೀದರ್‌ದಿಂದ ಫೆ.18 ರಂದು ಟೆಂಪೊ ಟ್ರಾವೆಲರ್ ವಾಹನದಲ್ಲಿ 14 ಜನ ಕುಂಭಮೇಳಕ್ಕೆ ತೆರಳಿದ್ದರು. ಪ್ರಯಾಗರಾಜ್ ಹಾಗೂ ಅಯೋಧ್ಯೆ ರಾಮ ಜನ್ಮಭೂಮಿ ದೇವಸ್ಥಾನ ದರ್ಶನ ಮುಗಿಸಿಕೊಂಡು ಫೆ.25ರಂದು ವಾಪಸ್ ಊರಿಗೆ ಬರುವಾಗ ಮಹಾರಾಷ್ಟ್ರದ ನಾಗಪುರ ಸಮೀಪದ ವಾರ್ಧಾ ಬಳಿ ಬೆಳಿಗ್ಗೆ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ದುರ್ಘಟನೆ ನಡೆದಿತ್ತು.
ಬೀದರ್ ಜಿಲ್ಲಾಡಳಿತದ ನೆರವಿನೊಂದಿಗೆ ಭಾನುವಾರ ರಾತ್ರಿ 11 ಗಂಟೆಗೆ ಮೃತದೇಹವನ್ನು ಸ್ವಗ್ರಾಮ ಜನವಾಡಕ್ಕೆ ತರಲಾಯಿತು. ಭಾನುವಾರ ರಾತ್ರಿ 1 ಗಂಟೆಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ʼಘಟನೆಯಲ್ಲಿ ದಿಲೀಪ್ ಕಾಳೇಕರ್ ಸೇರಿದಂತೆ 15 ಜನ ಗಾಯಗೊಂಡಿದ್ದರು. ಅವರನ್ನು ವಾರ್ಧಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಿಲೀಪ್ ಕಾಳೇಕರ್ ಚಿಕಿತ್ಸೆಗೆ ಸ್ಪಂದಿಸಿದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರು ಗುಣಮುಖರಾಗಿದ್ದಾರೆ, ಉಳಿದ 11 ಜನ ವಾರ್ದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆʼ ಎಂದು ಮೂಲಗಳಿಂದ ತಿಳಿದು ಬಂದಿದೆ.
ʼಮೃತ ದಿಲೀಪ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳನ್ನು ಬೀದರ್‌ಗೆ ಕರೆತಂದು ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು’ ಎಂದು ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ