ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಮತ್ತು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಜಿಲ್ಲಾ ಘಟಕ ಮೈಸೂರು ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಶ್ರೀವತ್ಸ ಚಾಲನೆ ನೀಡಿ ‘ ರಕ್ತ ದಾನದಿಂದ ಆರೋಗ್ಯ ವೃದ್ಧಿ ‘ ಎಂದರು.
” ಸ್ವಯಂಪ್ರೇರಿತ ರಕ್ತದಾನ ಆರೋಗ್ಯಕರ ಜೀವನಕ್ಕೆ ದಾರಿಯಾಗಿದ್ದು, ಮತ್ತೊಬ್ಬರ ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅಗತ್ಯ. ರಕ್ತದಾನದ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಸಾಕಷ್ಟು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು,
ಒಬ್ಬರ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದಾಗಿದೆ. ಏಕೆಂದರೇ ರಕ್ತವನ್ನು ಉತ್ಪಾದಸಲಾಗದು. ಮನುಷ್ಯ ದಾನ ಮಾಡಿದರಷ್ಟೇ ರಕ್ತದ ಉತ್ಪಾದನೆ ಸಾಧ್ಯ. ಆದ್ದರಿಂದ ಜನರು ಅದರಲ್ಲೂ ಯುವ ಪೀಳಿಗೆ ರಕ್ತದಾನ ಮಾಡಬೇಕು ಮತ್ತು ಈ ಬಗ್ಗೆ ಮತ್ತೊಬ್ಬರಿಗೂ ಅರಿವು” ಮೂಡಿಸಬೇಕೆಂದರು.
ರೋಟರಿ ಕ್ಲಬ್ ಆಫ್ ಹೆರಿಟೇಜ್‌ನ ಅಧ್ಯಕ್ಷ ರಾಜೇಶ್ ಆರ್ 50 ನೇ ಬಾರಿ ರಕ್ತದಾನ ಮಾಡಿ ಆರೋಗ್ಯದ ದೃಷ್ಟಿಯಿಂದ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಉತ್ತಮ ಬೆಳವಣಿಗೆ. ಕಳೆದ 26 ವರ್ಷದಿಂದ ರಕ್ತದಾನ ಮಾಡುತ್ತಿರುವ ನಾನು ಆರೋಗ್ಯವಂತ ಬದುಕನ್ನು ನಡೆಸುತ್ತಿದ್ದೇನೆ ಎಂದರು.

ರೋಟರಿ ಹೆರಿಟೇಜ್ ಕ್ಲಬ್‌ನ ಹಲವು ಸದಸ್ಯರು ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ನಡೆದ ಈ ಶಿಬಿರದಲ್ಲಿ, ಸುಮಾರು 72 ದಾನಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ರಕ್ತನಿಧಿ ಕೇಂದ್ರದಲ್ಲಿ ಅತಿ ಹೆಚ್ಚು ರಕ್ತದ ಕೊರತೆ ಇರುವುದರಿಂದ ಕೆಆರ್ ಆಸ್ಪತ್ರೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ರಕ್ತನಿಧಿ ಕೇಂದ್ರಗಳಿಗೆ ಇಂದಿನ ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ದಾನ ಮಾಡುವುದಾಗಿ ನಿರ್ಧರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತ ಕುಟುಂಬದೊಂದಿಗೆ ಅನುಚಿತ ವರ್ತನೆ, ಹಲ್ಲೆ : ಎಫ್ಐಆರ್ ದಾಖಲು
ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಾಗೇಂದ್ರ ಎಲ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ, ರೋಟರಿ ಕ್ಲಬ್ ನ ಕಾರ್ಯದರ್ಶಿ ಗೌರವ್ ಜಿ ಶರ್ಮ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಮೈಸೂರು ಅಧ್ಯಕ್ಷ ದಿವಾಕರ ಕೆ ಪಿ, ಕಾರ್ಯದರ್ಶಿ ನಟರಾಜು ಮತ್ತು ಉಪಾಧ್ಯಕ್ಷ ನೀಲಕಂಠ ಕುಮಾರ ಶೆಟ್ಟಿ, ರೋಟರಿ ಹೆರಿಟೇಜ್ ಕ್ಲಬ್‌ನ ಹಲವು ಸದಸ್ಯರು, ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.

