ಚಾಮರಾಜನಗರ ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿ ‘ಸಮಾನತೆಯ ಚರ್ಚೆ – ಭವಿಷ್ಯದ ಕರ್ನಾಟಕ ‘ ನಿರ್ಮಾಣದ ಕುರಿತಾದ ಸಂವಾದ ಸಭೆಯನ್ನು ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದು, ನಟ ಚೇತನ್ ಅಹಿಂಸಾ ಮಾತನಾಡಿ ‘ ಸತ್ಯದ ಪರ ಜನ ಸಾಮಾನ್ಯರು ನಿಲ್ಲಲಿ ‘ ಎಂದು ಕರೆ ನೀಡಿದರು.
” ಪ್ರಸ್ತುತ ದಿನಗಳಲ್ಲಿ ಎಡ, ಬಲ, ಮಧ್ಯಮ ಪಂಥದ ವಾದಿಗಳು ಇದ್ದಾರೆ. ಆದರೆ, ಜನ ಸಾಮಾನ್ಯರ ಜೀವನ ಮಟ್ಟ ಸುಧಾರಣೆ ಮಾಡುವ ಕಾರ್ಯದಿಂದ ಹಿಂದೆ ಬಿದ್ದಿವೆ. ಡಾ ಅಂಬೇಡ್ಕರ್ , ಕಾನ್ಸಿರಾಂ , ಪೆರಿಯಾರ್ ರವರ ವಿಚಾರಗಳು ಸತ್ಯದ ಪಂಥದಲ್ಲಿ ನಡೆಯುವ ಮಾರ್ಗವಾಗಿವೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರುದ್ಯೋಗ ಸಮಸ್ಯೆ , ಮಹಿಳಾ ಶೋಷಣೆ ಆಗದಂತೆ ತಡೆಯಲು ಒಂದು ನಿರ್ಣಾಯಕ ಶಕ್ತಿಯ ಅವಶ್ಯಕತೆ ಇದೆ.
ಮತ ಬ್ಯಾಂಕ್ ರಾಜಕಾರಣದಿಂದ ಪರಿವರ್ತನಾಕಾರರ ಮೂಲ ಆಶಯಗಳು ಸಫಲತೆ ಪಡೆದಿಲ್ಲ. ಬಡವ ಶ್ರೀಮಂತರ ನಡುವೆ ಅಂತರ ಹೆಚ್ಚುತಿದೆ. ಪ್ರಭುತ್ವದ ವಿರುದ್ಧ ನಿಲ್ಲುವ ಶಕ್ತಿಗಳ ಮೇಲೆ ಕೇಸು ದಾಖಲಿಸಿ ಬಾಯಿ ಮುಚ್ಚಿಸಲಾಗುತಿದೆ. ಸಾಮಾಜಿಕ ಜಾಲತಾಣಗಳು ಪ್ರಬಲವಾದ ಮಾದ್ಯಮ ಆಗಿದೆ. ಯುವ ಜನಾಂಗ ನಿಷ್ಕ್ರಿಯ ಮನೋಭಾವದಿಂದ ಹೊರ ಬರಬೇಕು.ದಾರ್ಶನಿಕರ ಹಾದಿಯಲ್ಲಿ ನಡೆದು ಸಧೃಢ ಸಮಾಜದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲು ಎಲ್ಲರೂ ಕೈ ಜೋಡಿಸಿ ಮುನ್ನಡೆಯ ಬೇಕಾಗಿದೆ ” ಎಂದರು.

ಸುಭಾಷ್ ಮಾಡ್ರಹಳ್ಳಿ ಮಾತನಾಡಿ ” ಸ್ವಾತಂತ್ರ್ಯ ಭಾರತದ ಸಮಾಜದಲ್ಲಿನ ವ್ಯವಸ್ಥೆಯ ಬಗ್ಗೆ ತೀವ್ರ ವಿರೋಧ ಇದೆ. ಅವರೆಲ್ಲರೂ ಒಂದು ವೇದಿಕೆ ಅಡಿಯಲ್ಲಿ ಬರಲು ಸಾಧ್ಯವಾಗಿಲ್ಲ. ನಟ ಚೇತನ್ ಅಹಿಂಸಾರವರು ಜನಪ್ರಿಯತೆಗಳಿಸಿದ್ದರು ಸಹ ಸಾಮಾಜಿಕ ಹೋರಾಟಗಾರರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ತೊಡಗಿಕೊಂಡಿದ್ದಾರೆ .ಅವರಲ್ಲಿ ಸಾಮಾಜಿಕ ಕಾಳಜಿಯ ನಡೆ ಗುರುತಿಸಬಹುದು. ಅಸಾಧ್ಯ ಎಂಬುದು ಯಾವುದು ಇಲ್ಲ,ಹಾಗಾಗಿ ಯುವ ಸಮುದಾಯ ಸಮಾಜದ ಧ್ವನಿಯಾಗಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹಾಡಿಗಳಿಗೆ ಬೆಳಕು; ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದ ಸಚಿವ ಕೆ ವೆಂಕಟೇಶ್
ಸಭೆಯಲ್ಲಿ ಆರ್ ಸೋಮಣ್ಣ , ರಾಘವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್ ಡಿ ಉಲ್ಲಾಸ್ , ಶಂಕರ್ , ಮುತ್ತಣ್ಣ , ವಕೀಲರಾದ ರಾಜೇಶ್, ಎಂ ಎನ್ ಸಂಪತ್ , ಅರುಣ್ ಗೌಡ , ಶಿವಕುಮಾರ್ , ಮಾಜಿ ಪುರಸಭಾ ಸದಸ್ಯ ಮೋಹನ್ ಕುಮಾರ್ , ಆಟೋ ನಾಗರಾಜ್ , ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಅಬ್ದುಲ್ ಮಾಲಿಕ್ , ಕರ್ನಾಟಕ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಮುನಿರ್ ಪಾಷಾ , ಮದ್ದಯ್ಯನಹುಂಡಿ ನಾಗರಾಜ್ ,ಬೆರಂಬಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ , ಸಂಶೋಧನಾ ವಿದ್ಯಾರ್ಥಿ ಗೌತಮ್ ಶಾಕ್ಯ , ವಕೀಲ ಮಹದೇವಸ್ವಾಮಿ , ಹೊನ್ನೆಗೌಡನಹಳ್ಳಿ ನಾಗಯ್ಯ , ಗೋಪಾಲ್ ಕಬ್ಬಹಳ್ಳಿ , ರಾಮೆಗೌಡ , ರವಿಕುಮಾರ್ , ಕೆ ಎಂ ಮನಸ್ ಇನ್ನಿತರರು ಇದ್ದರು.
