ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಬೊಜ್ಜು ಹೊಂದಿರುವ ಕ್ರೀಡಾಪಟು ಎಂದು ಹೇಳಿರುವುದು ಕ್ರಿಕೆಟ್ ಅಭಿಮಾನಿಗಳು ಹಾಗೂ ವಿವಿಧ ವಲಯದ ಗಣ್ಯರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಶಮಾ ಅವರು ‘ ರೋಹಿತ್ ಶರ್ಮಾ ಅವರು ಬೊಜ್ಜು ಹೊಂದಿರುವ ಕ್ರೀಡಾಪಟು! ತೂಕವನ್ನು ಇಳಿಸಿಕೊಳ್ಳಬೇಕು ಹಾಗೂ ಸಹಜವಾಗಿ ಭಾರತ ಕಂಡ ಪ್ರಬಾವಶಾಲಿಯಲ್ಲದ ನಾಯಕರಾಗಿದ್ದಾರೆ” ಎಂದು ಹೇಳಿದ್ದರು.
ಶಮಾ ಅವರು ಇದೇ ಸಂದರ್ಭದಲ್ಲಿ ಬೇರೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಕಪಿಲ್ ದೇವ್ ಅವರನ್ನು ರೋಹಿತ್ ಶರ್ಮಾ ಅವರಿಗೆ ಹೋಲಿಕೆ ಮಾಡಿ ಅವರೊಬ್ಬ ಸಾಧಾರಣ ನಾಯಕ ಹಾಗೂ ಆಟಗಾರ ಎಂದು ಹೇಳಿರುವುದಲ್ಲದೆ, ಅದೃಷ್ಟದಿಂದ ಟೀಂ ಇಂಡಿಯಾದ ನಾಯಕರಾಗಿದ್ದಾರೆ ಎಂದಿದ್ದಾರೆ.
ರೋಹಿತ್ ಸದೃಢತೆಯ ಬಗ್ಗೆ ಶಮಾ ಪೋಸ್ಟ್ ಹಾಕಿರುವುದಕ್ಕೆ ಹಲವರು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿಗಳು ಹೆಚ್ಚಾದಂತೆ ಪ್ರತಿಕ್ರಿಯೆ ನೀಡಿರುವ ಶಮಾ ಅವರು ಇದೊಂದು ಸಾಮಾನ್ಯ ಟ್ವೀಟ್ ಆಗಿದ್ದು, ದೇಹದ ಬಗ್ಗೆ ಹಗುರವಾಗಿ ಮಾತನಾಡಿರದೆ, ಕ್ರೀಡಾಪಟುವಿನ ಸದೃಢತೆಯ ಬಗ್ಗೆ ಹೇಳಿರುವುದಾಗಿ ತಿಳಿಸಿದ್ದಾರೆ.
“ಕ್ರೀಡಾಪಟುವಿನ ಫಿಟ್‌ನೆಸ್ ಬಗ್ಗೆ ನುಡಿದಿರುವ ಸಾಮಾನ್ಯ ಟ್ವೀಟ್ ಆಗಿದೆ. ಇದು ದೇಹವನ್ನು ಆಡಿಕೊಳ್ಳುವುದಲ್ಲ. ಕ್ರೀಡಾಪಟು ಯಾವಾಗಲು ಸದೃಢವಾಗಿರಬೇಕೆಂದು ನಾನು ನಂಬುತ್ತೇನೆ. ನನಗನಿಸಿದ್ದು ಅವರು ಸ್ವಲ್ಪ ದಪ್ಪಗಿದ್ದಾರೆ. ನಾನು ಆ ಬಗ್ಗೆ ಟ್ವೀಟ್ ಮಾಡಿದ್ದೇನೆ ವಿನಾ ಮನ ನೋಯಿಸುವ ಬೇರೆ ಉದ್ದೇಶವಿರಲಿಲ್ಲ. ಬೇರೆ ಹಿಂದಿನ ನಾಯಕರೊಂದಿಗೆ ಹೋಲಿಕೆ ಮಾಡಿದ್ದು, ಕೇವಲ ಹೇಳಿಕೆ ನೀಡಿರುವುದಷ್ಟೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾತನಾಡುವ ಹಕ್ಕಿದೆ. ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? 1800 ಕೋಟಿ ಖರ್ಚು ಮಾಡಿ ಕೇವಲ 16 ಗಂಟೆ ಆಟವಾಡಿದ ಪಾಕಿಸ್ತಾನ ತಂಡ
ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶಮಾ ಮೇಡಂ, ರೋಹಿತ್ ಅವರು ಭಾರತ ಕಂಡಂತ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕರಾಗಿದ್ದಾರೆಯೆ? ಅತ್ಯಂತ ವಿಲಕ್ಷಣವಾದ ಹೇಳಿಕೆ ನಿಮಗೆ ಎಲ್ಲಿಂದ ಬಂತು? ನಾನು ಒಂದಷ್ಡು ಕ್ರಿಕೆಟ್ ಆಡಿದ್ದೇನೆ. ದೀರ್ಘಕಾಲದ ವೀಕ್ಷಕನಾಗಿ ಹೇಳುವುದಾದರೆ ರೋಹಿತ್ ಶರ್ಮಾ ಅವರು ಕೆಲವು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ನಾಯಕನಾಗಿ ಹಲವು ಐಪಿಎಲ್ ಟ್ರೋಫಿಗಳನ್ನು ಜಯಿಸಿಕೊಟ್ಟಿದ್ದಾರೆ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಅವರಾಗಿದ್ದಾರೆ. ನನ್ನ ವಿನಮ್ರ ಅಭಿಪ್ರಾಯದಂತೆ, ಸೀಮಿತ ಓವರ್‌ಗಳಲ್ಲಿ ರೋಹಿತ್ ಶರ್ಮಾ ದೃತಿಗೆಡದೆ ತಂಡವನ್ನು ಮುನ್ನಡೆಸುವ ಟೀಂ ಇಂಡಿಯಾ ಕ್ರಿಕೆಟ್‌ನ ಅತ್ಯುತ್ತಮ ನಾಯಕರಾಗಿದ್ದಾರೆ(ತೂಕದಲ್ಲಿ ಹೇಳುವುದಾದರೆ ಅವರು ಪೇರಿಸಿರುವ ರನ್‌ಗಳನ್ನು ನೋಡಿ ನಿರ್ಣಯಿಸಿ ದಯವಿಟ್ಟು ಅವರ ತೂಕವನ್ನು ಗಮನಿಸಬೇಡಿ )” ಎಂದಿದ್ದಾರೆ.
ಸ್ವಪಕ್ಷವೂ ಸೇರಿ ಎಲ್ಲಡೆಯಿಂದ ಟೀಕೆಗಳು ಹೆಚ್ಚಾದ ನಂತರ ಶಮಾ ಮೊಹಮ್ಮದ್ ಅವರು ರೋಹಿತ್ ಅವರ ಬಗ್ಗೆ ಮಾಡಿದ್ದ ಪೋಸ್ಟ್‌ಅನ್ನು ಡಿಲೀಟ್ ಮಾಡಿದ್ದಾರೆ.
