ರಾಜ್ಯಪಾಲರ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?
”ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುತ್ತಿದ್ದಾರೆ” ಎಂದು ಆರೋಪಿಸಿ ಶಾಸಕರ ಭವನದಿಂದ ವಿಧಾನಸೌಧದವರೆಗೆ ರಾಜ್ಯ ಬಿಜೆಪಿಯ ನಾಯಕರು ಪಾದಯಾತ್ರೆ ನಡೆಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ, ”ರಾಜ್ಯ ಸರ್ಕಾರದ ಸಾಧನೆ ಏನೂ ಇಲ್ಲ. ಆದರೆ ರಾಜ್ಯಪಾಲರನ್ನು ಕರೆಸಿಕೊಂಡು ಸರ್ಕಾರವನ್ನು ಹೊಗಳಿಸಿಕೊಳ್ಳುತ್ತಿದ್ದಾರೆ, ಜೊತೆಗೆ ರಾಜ್ಯಪಾಲರ ಅಧಿಕಾರವನ್ನು ಕಾಂಗ್ರೆಸ್‌ನವರು ಮೊಟಕುಗೊಳಿಸುತ್ತಿದ್ದಾರೆ, ಮಸೂದೆಗೆ ಸಹಿ ಹಾಕದಿದ್ದಾಗ ಇದೇ ರಾಜ್ಯಪಾಲರನ್ನು ಅವಹೇಳನ ಮಾಡುತ್ತಾರೆ, ಬಿಜೆಪಿ ಏಜೆಂಟ್ ಎಂದು ನಿಂದಿಸುತ್ತಾರೆ, ಆದರೀಗ ಗವರ್ನರ್ ಮೂಲಕ ಸುಳ್ಳುಗಳನ್ನು ಹೇಳಿಸುತ್ತಿದ್ದಾರೆ, ಸರ್ಕಾರ ದಿವಾಳಿಯಾಗಿರುವುದನ್ನು ಮತ್ತು ಕಾನೂನು ಸುವ್ಯವಸ್ಥೆ ಹಾಳಾಗಿರುವುದನ್ನು ಮುಚ್ಚಿಡುತ್ತಿದ್ದಾರೆ. ರಾಜ್ಯಪಾಲರಿಗೆ ಗೌರವ ಕೊಡಲಾಗದವರು, ಅವರಿಂದ ಹೇಳಿಕೆ ಕೊಡಿಸುವ ಅಧಿಕಾರ ಹೊಂದಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಅಶೋಕ್ ಮತ್ತು ಬಿಜೆಪಿಯವರ ವಾದವನ್ನು ನೋಡಿದರೆ ಎಂಥವರಿಗೂ ನಗು ಬಾರದೆ ಇರದು. ರಾಜ್ಯ ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಓದಬೇಕಾಗಿರುವುದು ಅವರ ಸಾಂವಿಧಾನಿಕ ಕರ್ತವ್ಯ. ಸರ್ಕಾರದ ಮುಖ್ಯಸ್ಥರಾಗಿ, ಭಾಷಣ ಮಾಡಲೇಬೇಕು. ಅದನ್ನು ಉಲ್ಲಂಘಿಸಿದರೆ ಸದನದ ಸಂಪ್ರದಾಯಕ್ಕೆ ಮಾಡುವ ಅಪಚಾರವಾಗುತ್ತದೆ. ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರು, ಡಿಎಂಕೆ ಸರ್ಕಾರ ಬರೆದುಕೊಟ್ಟಿದ್ದನ್ನು ಓದದೆ ಉದ್ಧಟತನ ಮೆರೆದು ಭಾರೀ ಟೀಕೆಗೆ ಆಗಾಗ್ಗೆ ಒಳಗಾಗುತ್ತಾರೆ. ಅಸಹಕಾರದ ಎಲ್ಲೆಗಳನ್ನು ಮೀರಿ ವರ್ತಿಸಿ, ಅಕ್ಷರಶಃ ಕೇಂದ್ರದ ಆಣತಿಯಂತೆ, ಆರ್‌ಎಸ್‌ಎಸ್ ಪ್ರತಿನಿಧಿಯಂತೆ ರವಿ ವರ್ತಿಸಿ ಸೈದ್ಧಾಂತಿಕ ಸೇಡಿನ ರಾಜಕೀಯ ಮಾಡುತ್ತಾರೆ. ಬಿಜೆಪಿಯೇತರ ರಾಜ್ಯಗಳಲ್ಲಿನ ರಾಜ್ಯಪಾಲರ ಅಸಹಕಾರ ಪ್ರವೃತ್ತಿ ಟೀಕೆಗೆ ಒಳಗಾಗುತ್ತಲೇ ಇದೆ.
ಸಂವಿಧಾನದ 220ನೇ ವಿಧಿಗೆ ಸಂಬಂಧಿಸಿದಂತೆ ಅಭಿಪ್ರಾಯ ತಾಳಿರುವ ಸುಪ್ರೀಂಕೋರ್ಟ್, ಕೆಲವು ಸಂದರ್ಭಗಳಲ್ಲಿ ವಿವೇಚನಾಧಿಕಾರವನ್ನು ರಾಜ್ಯಪಾಲರು ಚಲಾಯಿಸಬಹುದೆಂದು ಹೇಳಿದೆ. ವಿವಾದಾಸ್ಪದ ಮಸೂದೆಗಳನ್ನು ರಾಜ್ಯ ಶಾಸಕಾಂಗ ಅಂಗೀಕರಿಸಿದ್ದರೆ ಅವುಗಳನ್ನು ತಡೆ ಹಿಡಿದು, ರಾಷ್ಟ್ರಪತಿಗಳ ತೀರ್ಮಾನಕ್ಕೆ ಸರ್ಕಾರ ಕಾಯ್ದಿರಿಸಬಹುದು. ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಕ್ಕೆ ಮಸೂದೆಗಳನ್ನು ವಾಪಸ್ ಕಳುಹಿಸಬಹುದು. ಆದರೆ ಇದೇ ಒಂದು ಅಸ್ತ್ರವಾಗಿ ಬಳಕೆಯಾಗುತ್ತಿದೆ. ಕರ್ನಾಟಕ ಸರ್ಕಾರದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರು ಪದೇ ಪದೇ ಮಸೂದೆಗಳನ್ನು ವಾಪಸ್ ಕಳಿಸಿದ್ದಾರೆ ಅರ್ಥಾತ್ ತಮ್ಮ ಬಳಿಯೇ ಹಲವು ಮಸೂದೆಗಳನ್ನು ಕಾಯ್ದಿರಿಸಿಕೊಂಡು ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡಿದ್ದಾರೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಸಂವಿಧಾನದತ್ತವಾಗಿ ರಾಷ್ಟ್ರಪತಿಯವರಿಂದ ನೇಮಕವಾಗುವ ರಾಜ್ಯಪಾಲರು ಬಹುತೇಕ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ನಿರ್ವಿವಾದ. ‘ಯಾವುದಾದರೂ ಕ್ಷೇತ್ರವೊಂದರಲ್ಲಿ ಪ್ರಖ್ಯಾತರಾದವರನ್ನು, ಸಕ್ರಿಯ ರಾಜಕೀಯದಿಂದ ದೂರ ಇರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಕು’ ಎಂದು 1988ರಲ್ಲಿ ಸಲ್ಲಿಕೆಯಾದ ಸಾರ್ಕರಿಯಾ ಆಯೋಗದ ವರದಿ ಸೂಚಿಸಿತ್ತು. ಆದರೆ ಈವರೆಗೆ ನೇಮಕವಾದ ಬಹುತೇಕರು ರಾಜಕಾರಣದ ಭಾಗವೇ ಆಗಿದ್ದಾರೆ.
1967ರವರೆಗೂ ರಾಜ್ಯಪಾಲರು ರಾಜಕಾರಣದ ಸರಕಾಗಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಾರಂಭಿಸಿದವು. ಆನಂತರ ರಾಜ್ಯಪಾಲರ ಮೂಲಕ ಸರ್ಕಾರಗಳನ್ನು ಬೆದರಿಸುವ ಕೆಲಸವನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಶುರು ಮಾಡಿತ್ತು. 1977ರ ಬಳಿಕ ಜನತಾ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಹಿಂದೆ ಇಂದಿರಾ ಗಾಂಧಿಯವರು ನೇಮಿಸಿದ್ದ ರಾಜ್ಯಪಾಲರುಗಳನ್ನು ಕೆಳಗಿಳಿಸುವ ಕೆಲಸವಾಯಿತು. ಮುಂದೆ ಮತ್ತೆ ಅಧಿಕ್ಕಾರಕ್ಕೇರಿದ ಇಂದಿರಾ ಗಾಂಧಿ ಸೇಡು ತೀರಿಸಿಕೊಂಡಿದ್ದರು.
ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಪಕ್ಷದೊಳಗೆ ತಿಕ್ಕಾಟ ಶುರುವಾಗಿ ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು. ಇದಕ್ಕೆ ರಾಮಕೃಷ್ಣ ಹೆಗಡೆಯವರ ಬೆಂ’ಬಲ’ವೂ ಇತ್ತು. ಹೀಗಿರುವಾಗ 1989ರ ಏಪ್ರಿಲ್‌ನಲ್ಲಿ ಆದ ಬೆಳವಣಿಗೆಗಳಲ್ಲಿ ಭಿನ್ನಮತೀಯ ನಾಯಕ ದೇವೇಗೌಡರು ರಾಜ್ಯಪಾಲರನ್ನು ಭೇಟಿಯಾದರು. ಕೆಲವು ಶಾಸಕರು ಬೊಮ್ಮಾಯಿ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದ ಪತ್ರ ನೀಡಿದ್ದಾರೆಂದು ಸುದ್ದಿಯಾಯಿತು. ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿ ಅಂದಿನ ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ಅವರು ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿದ್ದರು. ಬಹುಮತ ಸಾಬೀತಿಗೂ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬೊಮ್ಮಾಯಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಸ್.ಆರ್.ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. 1994ರ ಮಾರ್ಚ್ 11ರಂದು ಕೋರ್ಟ್ ತೀರ್ಪು ಪ್ರಕಟಿಸಿತ್ತು. ”ಜನರಿಂದ ಆಯ್ಕೆಯಾದ ಸರ್ಕಾರದ ಬಹುಮತವನ್ನು ವಿಧಾನಸಭೆಯಲ್ಲಿ ಮಾತ್ರ ಪರೀಕ್ಷೆಗೆ ಒಡ್ಡಬೇಕೇ ಹೊರತು, ರಾಜ್ಯಪಾಲರು ತಮ್ಮ ಬಣ್ಣದ ಚಾಳೀಸಿನಲ್ಲಿ ನೋಡಿ ನಿರ್ಣಯಿಸತಕ್ಕದ್ದಲ್ಲ” ಎಂದಿತು. ಈ ಚಾರಿತ್ರಿಕ ತೀರ್ಪಿನಿಂದಾಗಿ ಕೇಂದ್ರ ಸರ್ಕಾರದ ಗರ್ವಭಂಗವಾಯಿತು. ಒಂದಲ್ಲ ಒಂದು ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಮಸ್ಯೆಯನ್ನುಂಟು ಮಾಡುವ ಕೆಲಸವನ್ನು ರಾಜ್ಯಪಾಲರು ಮಾಡುತ್ತಲೇ ಇರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು.
ಹಂಸರಾಜ್ ಭಾರದ್ವಾಜ್ ಅವರು ರಾಜ್ಯದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಭ್ರಷ್ಟಾಚಾರದ ಕೊಳಕು ಮೆತ್ತಿಕೊಂಡು ಸರ್ಕಾರ ಹೈರಾಣಾಗಿತ್ತು. ಈ ಸಂದರ್ಭವನ್ನು ಹಂಸರಾಜ್ ಸಶಕ್ತವಾಗಿ ಬಳಸಿಕೊಂಡರು. ಸರ್ಕಾರವೇ ಕೋಲು ಕೊಟ್ಟು ಹೊಡೆಸಿಕೊಂಡಿತ್ತಷ್ಟೇ. ಬಿಎಸ್‌ವೈ ಆಡಳಿತವೂ ಹಾಗೆಯೇ ಇತ್ತು ಎಂಬುದು ಸತ್ಯ. ಕಾಂಗ್ರೆಸ್ ಮಾಡಿದ ರಾಜಕಾರಣಕ್ಕಿಂತ ಹತ್ತುಪಟ್ಟು ದಬ್ಬಾಳಿಕೆಯನ್ನು ಬಿಜೆಪಿ ಅವಧಿಯ ರಾಜ್ಯಪಾಲರು ಶುರು ಮಾಡಿದ್ದಾರೆ. ತಮಿಳುನಾಡು, ಕೇರಳದಲ್ಲಿ ಸೌಜನ್ಯದ ಎಲ್ಲೆಗಳನ್ನು ಮೀರಿದ್ದಾರೆ. ಕರ್ನಾಟಕದಲ್ಲಿ ಸ್ವಜನಪಕ್ಷಪಾತ ಮಾಡುತ್ತಿರುವ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖಕ್ಕೆ ಭ್ರಷ್ಟಾಚಾರದ ಮಸಿ ಬಳಿಯಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರು. ಇನ್ನೊಂದೆಡೆ ತಮ್ಮವರ ತಪ್ಪುಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಯಾದಗಿರಿ ಬಾಲಕಿಯರ ಅನುಮಾನಾಸ್ಪದ ಸಾವು; ಸಂಶಯಕ್ಕೆ ತೆರೆ ಎಳೆಯಬೇಕಿದೆ ಪೊಲೀಸ್ ಇಲಾಖೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ಲೋಕಾಯುಕ್ತರು ಕೋರಿಕೆ ಸಲ್ಲಿಸಿ ವರ್ಷ ತುಂಬುತ್ತಾ ಬಂದಿದೆ. ಆದರೆ ಗವರ್ನರ್ ಮಾತ್ರ ಸಬೂಬು ಹೇಳುತ್ತಾ ಬಂದರು. ಸರಿಯಾಗಿ ಅನುವಾದಗೊಂಡಿಲ್ಲ ಎಂದರು. ಸಿಎಂ ವಿರುದ್ಧ ಸಲ್ಲಿಕೆಯಾದ ವೈಯಕ್ತಿಕ ಅರ್ಜಿಯೊಂದರ ಮೇಲೆ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಮಾತ್ರ ವಿಚಿತ್ರ. ಇಷ್ಟಾದರೂ ರಾಜ್ಯಪಾಲರ ಮೇಲೆ ಸರ್ಕಾರ ಗದಾಪ್ರಹಾರ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?
ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಎಲ್ಲ ಅಸ್ತ್ರಗಳನ್ನು ಅಶಕ್ತವಾಗಿ ಬಳಸುವ ಕಲೆಯನ್ನು ಸಿದ್ಧಿಸಿಕೊಂಡಿದೆ ಕೇಂದ್ರ ಬಿಜೆಪಿ ಸರ್ಕಾರ. ಆ ಅಸ್ತ್ರಗಳಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಜೊತೆಗೆ ‘ರಾಜ್ಯಪಾಲ’ ಹುದ್ದೆ ಎಂಬ ಬತ್ತಳಿಕೆಯೂ ಸೇರಿದೆ. ಸರ್ಕಾರ ಕೊಟ್ಟ ಭಾಷಣವನ್ನು ಸದನದಲ್ಲಿ ಓದಿದ ಮಾತ್ರಕ್ಕೆ, ರಾಜ್ಯಪಾಲರ ರಾಜಕಾರಣದಲ್ಲಿ ಕೊಂಚವೂ ಬದಲಾವಣೆ ಆಗುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು, ಸರ್ಕಾರಕ್ಕೆ ಅಸಹಕಾರ ತೋರಿಸಲು ಎಲ್ಲ ಅವಕಾಶಗಳನ್ನು ರಾಜ್ಯಪಾಲರು ಮಾಡಿಯೇ ತೀರುತ್ತಾರೆ. ಈ ಸತ್ಯ ಗೊತ್ತಿದ್ದೂ, ಬಿಜೆಪಿಯವರು ಪ್ರತಿಭಟನೆ ಮಾಡುವುದು ಕೇವಲ ಪ್ರಚಾರದ ಗಿಮಿಕ್ ಅಷ್ಟೇ.
