ಚಿತ್ರದ ನಾಯಕಿ ಲಕ್ಷ್ಮಿದೇವಿಯವರು ಸೂರ್ಯ ಫಿಲಂ ಕಂಪನಿಯಲ್ಲಿ ಮೂಕಿ ಚಿತ್ರಗಳಲ್ಲಿ ನಟಿಸುವ ಮೂಲಕ ‘ಸೂರ್ಯ ಸ್ಟಾರ್’ ಎಂದು ಜನಪ್ರಿಯರಾಗಿದ್ದರು. ಪೌರಾಣಿಕ ನಾಟಕಗಳನ್ನು ರಚಿಸುವುದಕ್ಕೆ ಹೆಸರುವಾಸಿಯಾಗಿದ್ದ ಬೆಳ್ಳಾವೆ ನರಸಿಂಹಶಾಸ್ತ್ರಿಯವರು ಈ ಚಲನಚಿತ್ರಕ್ಕೆ ಸಾಹಿತ್ಯ, ಚಿತ್ರಗೀತೆಗಳನ್ನು ರಚಿಸುವ ಮೂಲಕ ಮೊಟ್ಟ ಮೊದಲ ವಾಕ್ಚಿತ್ರ ಸಾಹಿತಿ ಎಂದು ಪ್ರಸಿದ್ಧರಾದರು
ಕನ್ನಡದ ಮೊದಲ ವಾಕ್ಚಿತ್ರ (ಟಾಕಿ) ಎಂಬ ಖ್ಯಾತಿಯ ‘ಸತಿ ಸುಲೋಚನಾ’ ಚಲನಚಿತ್ರ ಬಿಡುಗಡೆಯಾಗಿ ಇಂದಿಗೆ ಅಂದರೆ ಮಾರ್ಚ್ 3, 2025ಕ್ಕೆ 91ವರ್ಷವಾಗಿದೆ. ಈ ಚಲನಚಿತ್ರವು ಮಾರ್ಚ್ 3, 1934 ರಂದು ಬೆಂಗಳೂರು ಸಿಟಿ ಮಾರುಕಟ್ಟೆಯ ಹತ್ತಿರವಿದ್ದ ‘ಪ್ಯಾರಾಮೌಂಟ್’ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ವೈ.ವಿ.ರಾವ್ (ಯರಗುಡಿಪಾಟಿ ವರದಾ ರಾವ್) ನಿರ್ದೇಶಿಸಿ, ಎಸ್. ಚಮನ್‍ಲಾಲ್ ಡೊಂಗಾಜಿ ‘ಸೌತ್ ಇಂಡಿಯಾ ಮೂವಿಟೋನ್’ ಚಿತ್ರ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿದ್ದರು. ಈ ಚಲನಚಿತ್ರಕ್ಕೆ ಚಿತ್ರಕಥೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಬೆಳ್ಳಾವೆ ನರಸಿಂಹಶಾಸ್ತ್ರಿಯವರು ಬರೆದಿದ್ದರು.
ವಾಲ್ಮೀಕಿ ರಾಮಾಯಣ ಆಧಾರಿತ ಕಥೆಯನ್ನು ಈ ಚಲನಚಿತ್ರವು ಒಳಗೊಂಡಿತ್ತು. ಚಲನಚಿತ್ರದ ತಾರಾಗಣದಲ್ಲಿ ನಾಯಕರಾಗಿ ಸುಬ್ಬಯ್ಯ ನಾಯ್ಡು, ನಾಯಕಿಯಾಗಿ ಲಕ್ಷ್ಮೀದೇವಿ, ನಾಗೇಂದ್ರರಾವ್, ತ್ರಿಪುರಾಂಬ, ಟಿ. ಶೇಷಾಚಲಮ್, ಇಂದುಬಾಲಾ ಮುಖ್ಯ ಭೂಮಿಕೆಯಲ್ಲಿದ್ದರು. ಚಿತ್ರಕ್ಕೆ ಆರ್. ನಾಗೇಂದ್ರರಾವ್ ಸಂಗೀತ ನಿರ್ದೇಶಿಸಿದ್ದರು ಹಾಗೂ ಪಾತ್ರವೊಂದರಲ್ಲೂ ನಟಿಸಿದ್ದರು.
ಇವರೆಲ್ಲರ ಪ್ರಯತ್ನದಿಂದಾಗಿ ಕನ್ನಡದ ಮೊದಲ ವಾಕ್ಚಿತ್ರ ಸಾಧ್ಯವಾಯ್ತು.
ಅರ್ದೇಶಿರ್ ಇರಾನಿಯವರು ನಿರ್ಮಿಸಿದ ‘ಆಲಂ ಅರಾ’ ಭಾರತ ಮೊದಲ ವಾಕ್ಚಿತ್ರ 1931ರಲ್ಲಿ ಬಿಡುಗಡೆಯಾಯಿತು. ಅಭೂತಪೂರ್ವ ಯಶಸ್ಸನ್ನು ದಾಖಲಿಸಿತ್ತು. ಈ ಕಾರಣದಿಂದಾಗಿ ಭಾರತದಲ್ಲಿಯೂ ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ವಾಕ್ಚಿತ್ರ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಚಲನಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿದ ತಂತ್ರಜ್ಞರಲ್ಲಿ ಹೆಚ್ಚಿನ ಖ್ಯಾತನಾಮರು ಮುಂಬಯಿ, ಕೋಲ್ಕತ್ತಾದಲ್ಲಿ ತರಬೇತಿ ಪಡೆದವರಾಗಿದ್ದರು. ಇದು ಸತಿ ಸುಲೋಚನಾ, ಭಕ್ತ ಧ್ರುವ ಮುಂತಾದ ಚಲನಚಿತ್ರ ನಿರ್ಮಾಣಕ್ಕೆ ಕಾರಣವಾಯಿತು.

ಬೆಂಗಳೂರಿನಲ್ಲಿ ಖ್ಯಾತ ಪಾತ್ರೆ ವ್ಯಾಪಾರಿಯಾಗಿದ್ದ ರಾಜಸ್ಥಾನದ ಮೂಲದವರಾದ ಚಮನ್‌ಲಾಲ್ ಡೊಂಗಾಜಿ ಮತ್ತು ಶಾಬರ್‌ಮಲ್ ಚಮನ್ ಲಾಲ್ ಜಿ ಇವರಿಬ್ಬರೂ ಚಲನಚಿತ್ರ ನಿರ್ಮಿಸುವ ಸಲುವಾಗಿ ಆರ್. ನಾಗೇಂದ್ರರಾಯರು ಮತ್ತು ಸುಬ್ಬಯ್ಯನಾಯ್ಡು ಅವರನ್ನು ಭೇಟಿಮಾಡಿ, ನೀವು ಜೊತೆಯಾಗಿ ಪಾಲ್ಗೊಳ್ಳುವುದಾದರೆ ನಾವು ಚಿತ್ರ ನಿರ್ಮಾಣ ಮಾಡಲು ತಯಾರಿದ್ದೇವೆಂದು ತಿಳಿಸಿದರು. ಸುಬ್ಬಯ್ಯನಾಯ್ಡು ಅವರ ಸಂಪರ್ಕದಲ್ಲಿ ಇದ್ದುದರಿಂದ ಆಗಲೇ ‘ಹರಿಮಾಯ’ ಚಲನಚಿತ್ರದ ನಿರ್ದೇಶನದ ಅನುಭವ ಹೊಂದಿದ್ದ ವೈ.ವಿ.ರಾವ್ ಅವರನ್ನು ಸತಿ ಸುಲೋಚನದ ನಿರ್ದೇಶಕರನ್ನಾಗಿ ತೆಗೆದುಕೊಳ್ಳಲಾಯಿತು.
ಚಿತ್ರದ ನಾಯಕಿ ಲಕ್ಷ್ಮೀದೇವಿಯವರು ಸೂರ್ಯ ಫಿಲಂ ಕಂಪನಿಯಲ್ಲಿ ಮೂಕಿ ಚಿತ್ರಗಳಲ್ಲಿ ನಟಿಸುವ ಮೂಲಕ ‘ಸೂರ್ಯ ಸ್ಟಾರ್’ ಎಂದು ಜನಪ್ರಿಯರಾಗಿದ್ದರು. ಪೌರಾಣಿಕ ನಾಟಕಗಳನ್ನು ರಚಿಸುವುದಕ್ಕೆ ಹೆಸರುವಾಸಿಯಾಗಿದ್ದ ಬೆಳ್ಳಾವೆ ನರಸಿಂಹಶಾಸ್ತ್ರಿಯವರು ಈ ಚಲನಚಿತ್ರಕ್ಕೆ ಸಾಹಿತ್ಯ, ಚಿತ್ರಗೀತೆಗಳನ್ನು ರಚಿಸುವ ಮೂಲಕ ಮೊಟ್ಟ ಮೊದಲ ವಾಕ್ಚಿತ್ರ ಸಾಹಿತಿ ಎಂದು ಪ್ರಸಿದ್ಧರಾದರು. ಛಾಯಾಗ್ರಹಣವನ್ನು ಕೊಯಮತ್ತೂರಿ ಛತ್ರಪತಿ ಸಿನಿಟೋನ್ ನಿರ್ವಹಿಸಿತ್ತು.
ಇದನ್ನೂ ಓದಿ ಫಿಲ್ಮ್ ಫೆಸ್ಟಿವಲ್ | ‘ಪೈರ್’ ಚೆನ್ನಾಗಿದೆ; ಉದ್ಘಾಟನಾ ಚಿತ್ರಕ್ಕಿರಬೇಕಾದ ನಿರೀಕ್ಷೆ ಹುಸಿಗೊಳಿಸಿದೆ
ಆರ್. ನಾಗೇಂದ್ರರಾವ್ ಕನ್ನಡದ ಮೊಟ್ಟಮೊದಲ ವಾಕ್ಚಿತ್ರ ಸಂಗೀತ ನಿರ್ದೇಶಕರೆನಿಸಿದರು. ಈ ಚಲನಚಿತ್ರದಲ್ಲಿ 25 ಹಾಡುಗಳಿದದ್ದು ವೈಶಿಷ್ಟ್ಯ. ಸತಿ ಸುಲೋಚನಾ ಚಲನಚಿತ್ರ ನಿರ್ಮಾಣಕ್ಕಾಗಿ 40,000 ರೂ.ಗಳು ವೆಚ್ಚವಾಗಿದ್ದವು. ಚಿತ್ರದ ಯುದ್ಧದ ಚಿತ್ರೀಕರಣಕ್ಕಾಗಿ 3 ಕ್ಯಾಮೆರಾಗಳನ್ನು ಬಳಸಿದ್ದರು. ನೂರು ಸಹನಟರು ಈ ಚಿತ್ರದಲ್ಲಿ ನಟಿಸಿದ್ದರು. ಹೀಗೆ ‘ಸತಿ ಸುಲೋಚನಾ,’ ಕನ್ನಡದ ಹಲವು ಮೊದಲುಗಳ, ವೈಶಿಷ್ಟಗಳನ್ನು ಒಳಗೊಂಡ ಅಭೂತಪೂರ್ವ ಚಲನಚಿತ್ರವಾಗಿ ಇತಿಹಾಸದಲ್ಲಿ ದಾಖಲಾಗಿದೆ.
