ಮತ್ತೆ ಬಿತ್ತದಿರಿ ಜಾತಿಯ ವಿಷಬೀಜ; ಜಾತ್ಯತೀತತೆಯ ಹೊಲದಲ್ಲಿ ಈಗಷ್ಟೇ ಸಮಾನತೆಯ ಪೈರು ಫಲ ಬಿಡುತ್ತಿದೆ…

Date:

Advertisements
ಜಾತಿ ವ್ಯವಸ್ಥೆಯ ಬ್ರಾಹ್ಮಣರ ಕುರಿತಾಗಿ ತಾವು ಹೇಳಿದ್ದು ಹೌದಾದರೆ ಬ್ರಾಹ್ಮಣರಿಗೆ ಈ ದೇಶದಲ್ಲಿ ಅನ್ಯಾಯವಾಗಿದೆ, ಆಗುತ್ತಿದೆ ಎನ್ನುವುದನ್ನು ಒಪ್ಪಲಾಗದು. ಹಾಗಾದರೆ ಈ ಜಾತಿವ್ಯವಸ್ಥೆ ಯಾರು ಮಾಡಿದರು..? ಏಕೆ ಮಾಡಿದರು…? ಮಾಡಿದ್ದರಿಂದ ಲಾಭ ಯಾರಿಗಾಯಿತು..? ಅದರಿಂದ ನೊಂದವರು, ಬೆಂದವರು ಯಾರು…? ಎಂಬಿತ್ಯಾದಿ ವಿಚಾರಗಳ ಪುನರಾವಲೋಕನ ಆಗಬೇಕಾಗಿದೆ 

ಮಾನ್ಯ ರೋಹಿತ್‌ ಚಕ್ರತೀರ್ಥ ಅವರೇ,
ನಾನು ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಈಗ ವೈದ್ಯನಾಗಿ, ಕನ್ನಡ ಪ್ರಾಧ್ಯಾಪಕನಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಬಾಲ್ಯದಿಂದ ಹಿಡಿದು ಪಿಎಚ್.ಡಿ ಅಧ್ಯಯನದವರೆಗೆ ಎಲ್ಲೂ ನನಗೆ ಬ್ರಾಹ್ಮಣ ಎನ್ನುವ ಕಾರಣಕ್ಕಾಗಿ ಅನ್ಯಾಯವಾಗಿಲ್ಲ. ನನ್ನ ಜಾತಿ, ಬಣ್ಣ ನೋಡಿ, ನನ್ನ ಕೌಟುಂಬಿಕ ಹಿನ್ನೆಲೆ ನೋಡಿ ನನಗೆ ಯಾರೂ ಮಣೆ ಹಾಕಿಲ್ಲ, ನನ್ನ ಓದು, ಅಧ್ಯಯನ, ಜ್ಞಾನ, ಸಂಸ್ಕಾರ, ವಿಷಯ ಮಂಡನೆಯೇ ಮೊದಲಾದ ಅಂಶಗಳನ್ನು ಗಮನಿಸಿಕೊಂಡು ಜ್ಞಾನದೇಗುಲಗಳಾದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಓದಿಗೆ ಅವಕಾಶ ನೀಡಿವೆ. ಸಮಾಜದಲ್ಲಿ ನಾನು ಯಾವ ಜಾತಿಯೆಂದು ಗಮನಿಸಿ, ಯಾವ ರೋಗಿಯೂ ನನ್ನ ಬಳಿಗೆ ಬರುವುದಿಲ್ಲ, ಅವರಿಗೆ ಬೇಕಿರುವುದು ಸಲಹೆ ಮತ್ತು ಚಿಕಿತ್ಸೆ. ನನ್ನ ವಿದ್ಯಾರ್ಥಿಗಳು ನಾನು ಯಾವ ಜಾತಿ ಅಂತ ಯೋಚಿಸಿ ನನ್ನ ಪಾಠ ಕೇಳುವುದಲ್ಲ, ಅವರು ಬಂದಿರುವುದು ಜ್ಞಾನಾರ್ಜನೆಗೆ.

ಇಂತಹ ಒಂದು ಸುಂದರವಾದ ಸಮಾನತೆಯ ಸಮಾಜ ನಿರ್ಮಾಣವಾಗುತ್ತಿರುವ ಈ ಸುಸಂದರ್ಭದಲ್ಲಿ ಬ್ರಾಹ್ಮಣರು ಯೆಹೂದಿಗಳಂತೆ ಪುಟಿದೇಳಬೇಕೆಂಬ ಚಕ್ರತೀರ್ಥರ ಹೇಳಿಕೆ ಸಮಂಜಸವಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ಚಾತುವರ್ಣ ಪದ್ದತಿಯ ಆಧಾರದ ಬ್ರಾಹ್ಮಣರ ಕುರಿತು ತಾವು ಹೇಳಿದ್ದಾದರೆ ಅಧ್ಯಯನ ಮಾಡಿರುವ ಜ್ಞಾನಿಗೆ ಬ್ರಾಹ್ಮಣ ಎಂದು ಗುರುತಿಸಬೇಕಾಗುತ್ತದೆ. ಇಂದು ಜ್ಞಾನಿಗೆ ಎಲ್ಲೆಡೆಯೂ ಗೌರವ ಸಮ್ಮಾನಗಳಿವೆ. ಎಲ್ಲಾ ಜಾತಿಯ, ಧರ್ಮದ ಮಕ್ಕಳು ಇಂದು ವಿದ್ಯಾರ್ಜನೆ ಮಾಡಿ ಜ್ಞಾನಿಗಳಾಗುತ್ತಿದ್ದಾರೆ. ಶಾಲಾ ಕಾಲೇಜಿನ ಶಿಕ್ಷಕರು ಬ್ರಾಹ್ಮಣರೇ ಆಗಿದ್ದಾರೆ, ಅವರುಗಳೇ ನಮ್ಮ ಮಕ್ಕಳಿಗೆ ಗುರುಗಳು, ಅವರ ಜಾತಿಯನ್ನು ನೋಡಿ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಹಾಗಾಗಿ ವರ್ಣ ವ್ಯವಸ್ಥೆ ತಪ್ಪೋ ಸರಿಯೋ ಎನ್ನುವ ಚರ್ಚೆ ಒಂದೆಡೆಯಾದರೆ, ವರ್ಣ ವ್ಯವಸ್ಥೆಯ ಬ್ರಾಹ್ಮಣರೆಂದರೆ ಅಧ್ಯಯನ ಮಾಡಿ ಜ್ಞಾನ ಪಡೆದವರು. ಜ್ಞಾನ ಪಡೆದವರಿಗೆ ಎಲ್ಲೂ ಅಸ್ತಿತ್ವದ ಪ್ರಶ್ನೆ ಎದುರಾಗಿಲ್ಲ, ಪೈಪೋಟಿ ಹೆಚ್ಚಾಗಿರಬಹುದು ಅಷ್ಟೇ…! ಮತ್ಯಾಕೆ ವರ್ಣ ವ್ಯವಸ್ಥೆಯ ಬ್ರಾಹ್ಮಣರು ಯೆಹೂದಿಗಳಾಗಬೇಕು ಸ್ವಾಮಿ…?

ಜಾತಿ ವ್ಯವಸ್ಥೆಯ ಬ್ರಾಹ್ಮಣರ ಕುರಿತಾಗಿ ತಾವು ಹೇಳಿದ್ದು ಹೌದಾದರೆ ಬ್ರಾಹ್ಮಣರಿಗೆ ಈ ದೇಶದಲ್ಲಿ ಅನ್ಯಾಯವಾಗಿದೆ, ಆಗುತ್ತಿದೆ ಎನ್ನುವುದನ್ನು ಒಪ್ಪಲಾಗದು. ಹಾಗಾದರೆ ಈ ಜಾತಿವ್ಯವಸ್ಥೆ ಯಾರು ಮಾಡಿದರು..? ಏಕೆ ಮಾಡಿದರು…? ಮಾಡಿದ್ದರಿಂದ ಲಾಭ ಯಾರಿಗಾಯಿತು..? ಅದರಿಂದ ನೊಂದವರು, ಬೆಂದವರು ಯಾರು…? ಎಂಬಿತ್ಯಾದಿ ವಿಚಾರಗಳ ಪುನರವಲೋಕನ ಆಗಬೇಕಾಗಿದೆ. ಆಹಾರ ಪದ್ದತಿಯನ್ನು ಜಾತಿ ವ್ಯವಸ್ಥೆಯಲ್ಲಿ ಮಾನದಂಡವಾಗಿಸಿ, ಸಸ್ಯಹಾರಿಗಳು ಬುದ್ದಿವಂತರು, ಶ್ರೇಷ್ಠರು ಎಂಬ ಏಕಮುಖ ತೀರ್ಪನ್ನು ಹರಿಯಬಿಡುವವರೂ ಇದ್ದಾರೆ. ಹಾಗೆ ಹೇಳುವವರಿಗೆ ಚಕ್ರತೀರ್ಥರ ಬ್ರಾಹ್ಮಣರಿಗೆ ಯೆಹೂದಿಗಳು ಮಾದರಿಯಾಗಬೇಕೆಂಬ ಮಾತೇ ಉತ್ತರ ನೀಡೀತು. ಏಕೆಂದರೆ ಯೆಹೂದಿಗಳು ಮಿಶ್ರಾಹಾರಿಗಳು (ಸಸ್ಯಹಾರ + ಮಾಂಸಹಾರ ಸೇವಿಸುವವರು) ಅವರು ಬುದ್ದಿವಂತರು ಎನ್ನುವುದನ್ನು ಚಕ್ರತೀರ್ಥರೇ ಒಪ್ಪಿಕೊಂಡಿದ್ದಾರೆ ಹಾಗಾದರೆ ತಿನ್ನುವ ಆಹಾರವಾಗಲೀ ಹುಟ್ಟಿದ ಜಾತಿಯಾಗಲೀ ನಮ್ಮ ವ್ಯಕ್ತಿತ್ವ, ಪಾಂಡಿತ್ಯವನ್ನು ಅಳೆಯುವ ಮಾನದಂಡವಲ್ಲ. ವ್ಯಕ್ತಿಯ ಓದು, ಅಧ್ಯಯನ, ಪರಿಶ್ರಮ, ಚಿಂತನೆ, ಸತ್ಕಾರ್ಯಗಳು ಅವನನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಅಬ್ದುಲ್ ಕಲಾಂ ರಂತಹ ಮೇಧಾವಿಗಳನ್ನು ಜಾತಿ, ಧರ್ಮದ ಪರಿಧಿಯಲ್ಲಿ ಗುರುತಿಸಲು ಸಾಧ್ಯವೇ…? ಬುದ್ದಿವಂತಿಕೆ, ಮಾನವೀಯತೆ, ಸದ್ಗುಣಗಳು ಯಾವುದೋ ಒಂದು ಜಾತಿ, ಧರ್ಮದವರ ಸ್ವತ್ತಲ್ಲ. ಅದು ನಾವು ಬೆಳೆಸಿಕೊಳ್ಳುವ, ಗಳಿಸಿಕೊಳ್ಳುವಂತವು.

ಈಗ ಮುಖ್ಯ ವಿಷಯಕ್ಕೆ ಬರುವುದಾದರೆ ಬ್ರಾಹ್ಮಣರು ಯೆಹೂದಿಗಳಂತೆ ಎದ್ದು ನಿಲ್ಲಬೇಕಿದೆ ಎನ್ನುವ ಮಾತಿನ ಒಳಮರ್ಮವೇನು…? ಎದ್ದು ನಿಲ್ಲಬೇಕೆನ್ನುವಲ್ಲಿ ಬ್ರಾಹ್ಮಣರು ಕೆಳಗೆ ಬಿದ್ದಿದ್ದಾರೆ ಎನ್ನುವ ಪರೋಕ್ಷ ಅರ್ಥವೂ ಸಿಗುತ್ತದೆ. ಸಂವಿಧಾನ ನೀಡಿರುವ ಮೀಸಲಾತಿ ದಲಿತ, ಹಿಂದುಳಿದವರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದು ಸಮಾನ ಅವಕಾಶ ಪಡೆಯಬೇಕು ಎನ್ನುವ ಸದುದ್ದೇಶದಿಂದ ಕೂಡಿರುವಂತಹದ್ದೇ ಹೊರತು ಬ್ರಾಹ್ಮಣರನ್ನು ಅವಿದ್ಯಾವಂತರನ್ನಾಗಿಸಬೇಕೆಂದೋ, ಬಡವರನ್ನಾಗಿಸಬೇಕೆಂದೋ ಮಾಡಿದ್ದಲ್ಲ. ನಮ್ಮ ನಮ್ಮ ಅಧ್ಯಯನ, ಶ್ರಮ ನಮಗೆ ತನ್ನಿಂತಾನೇ ಅವಕಾಶ, ವೇದಿಕೆಯನ್ನು ಒದಗಿಸುತ್ತದೆ.

ಅಂಬೇಡ್ಕರ್, ಮಹಾತ್ಮ ಗಾಂಧಿ ಮೊದಲಾದ ಸುಧಾರಕರು ಅಂದು ಅಸ್ಪೃಶ್ಯತೆ, ಜಾತೀಯತೆ ವಿರುದ್ದ ಹೋರಾಡಿದ್ದರು. ಹಾಗಾದರೆ ಅಂದು ಜಾತಿವ್ಯವಸ್ಥೆ ಮಾಡಿದವರು ಯಾರು…? ಅದರ ಲಾಭ ಪಡೆದವರು ಯಾರು…? ಇಂದು ಮೀಸಲಾತಿಯ ವಿರುದ್ದ ಮಾತನಾಡುತ್ತಿರುವವರು ಯಾರು…? ಇದನ್ನೆಲ್ಲಾ ನಾವು ಅವಲೋಕಿಸಿದಾಗ ಯಾರು ಯೆಹೂದಿಗಳಂತೆ ಎದ್ದು ನಿಲ್ಲಬೇಕು ಎನ್ನುವುದನ್ನು ಮತ್ತೊಮ್ಮೆ ಇಡೀ ಸಮಾಜ ಯೋಚಿಸಬೇಕಿದೆ. ದೇವಸ್ಥಾನ ಪ್ರವೇಶವನ್ನು ದಲಿತರಿಗೆ ನಿರಾಕರಿಸಿದವರಾರು..? ಅಸ್ಪೃಶ್ಯತೆ ಎಲ್ಲಿಂದ ಪ್ರಾರಂಭವಾಯಿತು..? ಶೂದ್ರರಿಗೇಕೆ ಉಪನಯನವನ್ನು, ಅಧ್ಯಯನವನ್ನು ನಿಷಿದ್ದಗೊಳಿಸಿದವರಾರು..? ಮುಂತಾದ ವಿಚಾರಗಳನ್ನು ಪ್ರಾಂಜಾಲ ಮನಸ್ಸಿನಿಂದ ಕುಳಿತು ಚರ್ಚಿಸಬೇಕಾಗಿದೆ. ಬೇರೆಯವರು ಉಪವಾಸ ಇದ್ದರೂ ಪರವಾಗಿಲ್ಲ ತಾವು ಹೊಟ್ಟೆತುಂಬ ಊಟ ಮಾಡುತ್ತಿದ್ದವರಿಗೆ ಈಗ ಎಲ್ಲರೂ ಊಟ ಮಾಡುವುದನ್ನು ಕಂಡು ಸಹಿಸಲಾಗುತ್ತಿಲ್ಲ ಅಷ್ಟೇ…! ಬುದ್ದಿಮತ್ತೆ ತಮ್ಮ ಸ್ವತ್ತು ಎಂದುಕೊಂಡವರಿಗೆ ಈಗ ಎಲ್ಲರೂ ಓದಿ ಬುದ್ದಿವಂತರಾಗುತ್ತಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ..! ತಾವು ಶ್ರೇಷ್ಠರು, ಪರರು ಕನಿಷ್ಟರೆಂದು ಕತೆ ಕಟ್ಟಿದ್ದವರಿಗೆ ಎಲ್ಲರೂ ಸಮಾನರೆನ್ನುವ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ ಅಷ್ಟೇ….!

ಅವರವರ ಅಸ್ತಿತ್ವಕ್ಕೆ ಕಂಟಕ ಬಂದಾಗ ಪ್ರತಿಯೊಬ್ಬರೂ ಎದ್ದು ನಿಲ್ಲುತ್ತಾರೆ. ಅದನ್ನೇ ಅಂದು ಯೆಹೂದಿಗಳು ಮಾಡಿದ್ದು. ನಮ್ಮ ದೇಶದಲ್ಲಿ ಯೆಹೂದಿಗಳಂತೆ ಎದ್ದು ನಿಲ್ಲಬೇಕಾದವರು ಬ್ರಾಹ್ಮಣರಲ್ಲ, ಜಾತಿವ್ಯವಸ್ಥೆಯ ಕ್ರೌರ್ಯದ ತಾಪದಲ್ಲಿ ಕರಗಿಹೋದ ದಲಿತರು, ಹಿಂದುಳಿದವರು ನೆಟ್ಟಗೆ ಎದ್ದು ನಿಲ್ಲಬೇಕಾಗಿದೆ. ಅವರ ಜೊತೆ ನಾವೆಲ್ಲ ಒಂದೇ ಎನ್ನುವ ನಿತ್ಯಸತ್ಯವನ್ನು ಒಪ್ಪಿಕೊಂಡು ಬ್ರಾಹ್ಮಣರು ಸಹಬಾಳ್ವೆ ಮಾಡಬೇಕಾಗಿದೆ. ಇತಿಹಾಸದ ಪುಟದಲ್ಲಿ ಶೂದ್ರರು ಬ್ರಾಹ್ಮಣರನ್ನು ತುಳಿದ ನಿದರ್ಶನಗಳೆಲ್ಲೂ ಸಿಕ್ಕಿಲ್ಲ. ಈಗಲೂ ಬ್ರಾಹ್ಮಣರಿಗೆ ಕಿರುಕುಳ ನೀಡುವ, ಅಪಮಾನಿಸುವ ಪ್ರಕರಣಗಳು ನಡೆಯುತ್ತಿರುವುದು ಕಾಣಿಸುತ್ತಿಲ್ಲ‌ ಹಾಗೊಂದು ವೇಳೆ ನಡೆದಲ್ಲಿ ಈ ದೇಶದ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ, ಅದರ ಮೂಲಕವೇ ನಾವು ನ್ಯಾಯವನ್ನು ಪಡೆಯಬಹುದು.

ಇದನ್ನು ಓದಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ: ಪೋಕ್ಸೊ ಕೈಬಿಟ್ಟ ದೆಹಲಿ ಪೊಲೀಸ್‌

ನಮ್ಮ ನಮ್ಮ ಜಾತಿಯ ಪರಿಧಿಯಿಂದ ಹೊರಬಂದು ಎಲ್ಲರೂ ನಮ್ಮವರೇ ಎಂದು ಭಾವಿಸಿದಾಗ ಯಾವ ಸಮಸ್ಯೆಯೂ ಕಾಣಿಸದು. ನನಗೆ ಎಲ್ಲಾ ರೋಗಿಗಳು ಮನುಷ್ಯರಾಗಿ ಕಾಣುತ್ತಾರೆಯೇ ಹೊರತು ಅವರು ಬ್ರಾಹ್ಮಣರು, ಇವರು ದಲಿತರು, ಮತ್ತೊಬ್ಬರು ಹಿಂದುಳಿದವರು ಎನ್ನುವ ಭೇದಭಾವ ಕಾಣಿಸದು. ಹಾಗೆಯೇ ಕಾಲೇಜಿನಲ್ಲಿ ನಾವು ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ತೆರನಾಗಿ ಪಾಠ ಮಾಡುತ್ತೇವೆ, ಅಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಬೇರೆ, ಹಿಂದೂ ವಿದ್ಯಾರ್ಥಿಗೆ ಬೇರೆ ಪಾಠ ಪ್ರವಚನ ಮಾಡಲ್ಲ. ಅದಕ್ಕಾಗಿಯೇ ಸಿದ್ದಯ್ಯ ಪುರಾಣಿಕರು ಹೇಳಿದ್ದು…
“ಓದಿ ಬ್ರಾಹ್ಮಣನಾಗು
ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು
ದುಡಿದು ಗಳಿಸಿ…

ಹಿಂದೂ ಮುಸಲಿಮನಾಗು
ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೇ ಆಗು
ಭೊಗ ಬಯಸಿ…..

ಏನಾದರೂ ಆಗು
ಮೊದಲು ಮಾನವನಾಗು..”

ಚಕ್ರತೀರ್ಥರೇ ಬ್ರಾಹ್ಮಣರನ್ನು ಇತರೇ ಜಾತಿ, ಧರ್ಮದವರಿಂದ ಬೇರೆ ಎನ್ನುವಂತೆ ಹಾಗೂ ಇತರರಿಂದ ಬ್ರಾಹ್ಮಣರ ಅಸ್ತಿತ್ವಕ್ಕೆ ಸಂಕಟ ಬಂದಿದೆ ಎನ್ನುವಂತಹ ಹೇಳಿಕೆ ನೀಡಿ ಜಾತಿಗಳ ನಡುವೆ ಕಿಡಿ ಹಚ್ಚದಿರಿ. ನಿಮಗೆ ಬ್ರಾಹ್ಮಣ ಎನ್ನುವುದೇ ಅಸ್ಮಿತೆಯಾಗಿರಬಹುದು, ನಮಗೆ ನಾವು ಮನುಷ್ಯರು ಎನ್ನುವುದು ಹೆಮ್ಮೆಯ ಸಂಗತಿ.

Advertisements
ಸುಬ್ರಹ್ಮಣ್ಯ ಭಟ್‌ ೧
ಡಾ ಸುಬ್ರಹ್ಮಣ್ಯ ಭಟ್‌, ಬೈಂದೂರು
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. ಸುಬ್ರಹ್ಮಣ್ಯ ಭಟ್ಟರೇ, ತಮ್ಮ ಈ ಬರಹಕ್ಕೆ ಹಾಗೂ ಆಲೋಚನೆಗೆ ಅಭಿನಂದನೆಗಳು. ಜಾತೀವಾದಿ, ಮನುಸ್ಮೃತಿಯ ಆರಾಧಕರಾದ ಚಕ್ರತೀರ್ಥರಿಗೆ ತಮ್ಮ ಈ ಮಾನವೀಯತೆಯ ಬರಹ ಕಣ್ಣು ತೆರೆಸುತ್ತದೆಂದು ಆಶಿಸುತ್ತೇನೆ.
    ಈಗಿನ ದ್ವೇಷ ಹಂಚುವ ಸಮಾಜದ ಕಾಲಘಟ್ಟದಲ್ಲಿ ನಿಮ್ಮಂತಹ ಆಲೋಚನೆಯಿರುವಂತವರು ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ. ನಿಮ್ಮಂತಹ ಆಲೋಚನೆ ಉಳ್ಳವರ ಸಂಖ್ಯೆ ಇನ್ನೂ ಹೆಚ್ಚಲಿ. ನಿಮ್ಮಂತಹ ಗುರುಗಳನ್ನು ಪಡೆದ ಶಿಷ್ಯಂದಿರು ಪುಣ್ಯವಂತರು.

  2. ಡಾ.ಸುಬ್ರಹ್ಮಣ್ಯ ಸರ್, ಪ್ರಸ್ತುತ ಕಾಲದಲ್ಲಿ ತಮ್ಮಂತಹ ಆಲೋಚನೆ ಮಾಡುವವರು ಅತ್ಯವಶ್ಯ ಬೇಕಾಗಿದೆ. ತುಳಿತಕ್ಕೊಳಗಾದವರೆಲ್ಲರೂ ಬಯಸುವದು ಎಲ್ಲರೂ‌ ಸಮಾನತೆಯಿಂದ, ಸಹಬಾಳ್ವೆ ಮಾಡಬೇಕೆಂಬ ಮಹದಾಸೆಯೇ ಹೊರತು ಬೇರೇನೂ ಅಲ್ಲ. ಆದರೆ ಕೆಲವರು ಸ್ವ ಹಿತಾಸಕ್ತಿಗೋಸ್ಕರ ಸಮಾಜವನ್ನು ಬಲಿಕೊಡುತ್ತಿದ್ದಾರೆ. ಅಭಿನಂದನೆಗಳು ಸರ್. ತಮ್ಮ ವಿಚಾರಕ್ಕೆ ಅನಂತ ಶರಣಾರ್ಥಿಗಳು.

    • ಈದಿನ ತಾಣದ ಭೇಟಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

  3. ಭಾರತವೆಂಬುದು ಹಲವಾರು ಜನಾಂಗಿಕ ಮೂಲದ ಉದಾಹರಣೆಗೆ ಮೂಲನಿವಾಸಿಗಳು,ಆರ್ಯರು, ಸಂತಾಲಿಯರು, ಮಂಗೋಲಿಯರು, ಅರಬರು, ಟರ್ಕರು, ಪರ್ಷಿಯನರು ಮುಂತಾದವರು ಸಮಾಗಮಿಸಿರುವ ಸುಂದರ ಹೂದೋಟ. ವರ್ಣಾಶ್ರಮದ ಹಂಗು ನಮಗ್ಯಾಕೆ?. ಡಾ. ಸುಬ್ರಹ್ಮಣ್ಯ ಅವರು ಮನಗಂಡು, ಉಳಿದವರ
    ಮನಗಾಣಿಸುವ ಹಂಬಲದ ಈ ಬರಹಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X