ಮಹಿಳಾ ಪೊಲೀಸ್ ಅಧೀಕ್ಷಕರೊಬ್ಬರಿಗೆ(ಎಸ್‌ಪಿ) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಮಾಜಿ ಡಿಜಿಪಿ ರಾಜೇಶ್ ದಾಸ್ ಅವರಿಗೆ ವಿಲ್ಲುಪುರಂನ ಸ್ಥಳೀಯ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 10,000 ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಫೆಬ್ರವರಿ 2021 ರಲ್ಲಿ ಮಾಜಿ ಡಿಜಿಪಿ ರಾಜೇಶ್ ದಾಸ್ ವಿರುದ್ಧ ದೂರು ದಾಖಲಿಸಿದ್ದರು. ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸಾಮಿ ಅವರ ಭದ್ರತೆಗಾಗಿ ಗಸ್ತು ಕರ್ತವ್ಯದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಡಿಜಿಪಿ ಆಗಿದ್ದ ರಾಜೇಶ್ ದಾಸ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದರು.
ಈ ಪ್ರಕರಣದಲ್ಲಿ ತಮಿಳುನಾಡು ಮಾಜಿ ವಿಶೇಷ ಪೊಲೀಸ್ ಮಹಾನಿರ್ದೇಶಕ ರಾಜೇಶ್ ದಾಸ್ ಅವರನ್ನು ದೋಷಿ ಎಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ. ಪುಷ್ಪರಾಣಿ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಮಹಿಳೆಯರ ಮೇಲಿನ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಕಿರುಕುಳ ನೀಡಿದ ಆರೋಪಕ್ಕಾಗಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ರಾಜೇಶ್ ದಾಸ್ ವಿರುದ್ಧ ದೂರು ನೀಡಲು ಚೆನ್ನೈಗೆ ತೆರಳುತ್ತಿದ್ದಾಗ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಡೆದಿದ್ದಕ್ಕಾಗಿ ಎಫ್ಐಆರ್‌ನಲ್ಲಿ ಹೆಸರಿಸಲಾದ ಅಂದಿನ ಚೆಂಗಲ್ಪಟ್ಟು ಪೊಲೀಸ್ ವರಿಷ್ಠಾಧಿಕಾರಿ ಕಣ್ಣನ್ ಅವರನ್ನು ಸಹ ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಪು ನೀಡಿ, ಅವರಿಗೆ ₹500 ದಂಡ ವಿಧಿಸಿದೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಆರೋಪಿಯೊಂದಿಗೆ ರಾಜಿಗೆ ಮುಂದಾದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶ
ಪ್ರಕರಣದ ಸಲುವಾಗಿ ಅಂದಿನ ಎಐಎಡಿಎಂಕೆ ಸರ್ಕಾರ ದಾಸ್ ಅವರನ್ನು ಅಮಾನತುಗೊಳಿಸಿತ್ತು ಮತ್ತು ತನಿಖೆಗಾಗಿ ಆರು ಸದಸ್ಯರ ಸಮಿತಿ ರಚಿಸಿತ್ತು.
ಅಪರಾಧ ದಳದ ತನಿಖಾ ವಿಭಾಗವು ಜುಲೈ 2021 ರಲ್ಲಿ ದಾಸ್ ವಿರುದ್ಧ 400 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತು. ವಿಚಾರಣೆಯು 2021 ರಲ್ಲಿ ವಿಲ್ಲುಪುರಂನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ವಿಚಾರಣೆಯ ಸಮಯದಲ್ಲಿ, 70 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಯಿತು.
ಅಧಿಕಾರಿಯು ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡಬಹುದು ಮತ್ತು ತಕ್ಷಣದ ಜಾಮೀನು ಪಡೆಯಬಹುದು” ಎಂದು ಪ್ರಾಸಿಕ್ಯೂಷನ್ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಈ ಘಟನೆಯು 2021 ರಲ್ಲಿ ಚುನಾವಣಾ ವಿಷಯವಾಗಿ ಮಾರ್ಪಟ್ಟಿತ್ತು ಮತ್ತು ಆಗಿನ ವಿರೋಧ ಪಕ್ಷದ ನಾಯಕ ಎಂ ಕೆ ಸ್ಟಾಲಿನ್ ಅಧಿಕಾರಕ್ಕೆ ಬಂದರೆ ಸರಿಯಾದ ಕಾನೂನು ಪ್ರಕ್ರಿಯೆ ಮತ್ತು ಶಿಕ್ಷೆಯನ್ನು ಕೊಡಿಸುವುದಾಗಿ ಮಹಿಳಾ ಅಧಿಕಾರಿಗೆ ಭರವಸೆ ನೀಡಿದ್ದರು.