ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅವರನ್ನು ಅಪಹರಿಸಿ ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೋಕಾಕ್‌ನ ಕೊಣ್ಣೂರು ಮೂಲದ ಮಂಜುಳಾ ರಾಮನಗಟ್ಟಿಯನ್ನು ಬಂಧಿಸಲಾಗಿದೆ.
ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಡಿ ಗ್ರೂಪ್ ಹಾಗೂ ಹೊರಗುತ್ತಿಗೆ ನೌಕರಿ ಕೊಡಿಸುವುದಾಗಿ ಇಬ್ಬರಿಂದ ತಲಾ ₹2.5 ಲಕ್ಷ ಲಂಚ ಪಡೆದಿರುವುದಾಗಿ ಕುಲಗೋಡ ಪೊಲೀಸ್ ಠಾಣೆಯಲ್ಲಿ ಮಂಜುಳಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುಳಾ ಜತೆಗೆ ಯಲ್ಲೇಶ ವಾಲಿಕಾರ ಹಾಗೂ ಪರಶುರಾಮ ಕಾಂಬಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ರಾಜಕೀಯ ಪಕ್ಷದೊಂದಿಗೆ ಆಕೆ ಗುರುತಿಸಿಕೊಂಡಿದ್ದಾರೆ. ಆದರೆ ಅಪರಹರಣಕ್ಕೂ ಆ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ಮಂಜುಳಾ ಬಂಧಿಸದಂತೆ ಯಾವ ರಾಜಕಾರಣಿಯೂ ಪ್ರಭಾವ ಬೀರಿಲ್ಲ. ಹಾಗಿದ್ದಿದ್ದರೆ 7 ಮಂದಿಯನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದರು.
“ಬಸವರಾಜ ಅಂಬಿ ಅವರ ಅಪಹರಣಕ್ಕೆ ಮಂಜುಳಾ ಅವರೇ ಸಂಚು ರೂಪಿಸಿದ್ದರು. ಹಣ ಪಡೆದು ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ಬಸವರಾಜು ಬಳಿ ಕಸಿದುಕೊಂಡಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್, 4 ಕಾರು ಸೇರಿದಂತೆ ಇತರೆ ವಸ್ತುಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ
ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆ ಮಂಜುಳಾ ರಾಮನಗಟ್ಟಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ. ಅವರಿಗೆ ಪಕ್ಷದ ಯಾವುದೇ ಹುದ್ದೆ ಅಥವಾ ಸದಸ್ಯತ್ವ ನೀಡಿಲ್ಲ ಎಂದು ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
