ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಕೊಂಡಿಯನ್ನು ಕಳಚಿಕೊಂಡು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಬಳಿ ನಡೆದಿದೆ. ಸದ್ಯ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎದುರಾಗಬಹುದಾಗಿದ್ದ ಭಾರೀ ಅವಘಡವೊಂದು ತಪ್ಪಿದೆ.
ದೀನ್ ದಯಾಳ್ ಜಂಕ್ಷನ್‌ನಿಂದ ಹೊರಟ ನಂದನ್ ಕಾನನ್ ಎಕ್ಸ್‌ಪ್ರೆಸ್ ರೈಲು, ಸ್ವಲ್ಪ ಸಮಯದಲ್ಲಿಯೇ ಇದ್ದಕ್ಕಿದ್ದಂತೆ ಎರಡು ಭಾಗಗಳಾಗಿ ಕಳಚಿಕೊಂಡಿದೆ. ಕಪ್ಲಿಂಗ್ ವೈಫಲ್ಯದಿಂದ ರೈಲು ಇಬ್ಭಾಗವಾಗಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ದೆಹಲಿಯ ಆನಂದ್ ವಿಹಾರ್‌ನಿಂದ ಒಡಿಶಾದ ಪುರಿಗೆ ರೈಲು ಚಲಿಸುತ್ತಿತ್ತು. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ನಿಲುಗಡೆ ಹೊಂದಿತ್ತು. ಅಲ್ಲಿಂದ ಪ್ರಯಾಣವನ್ನು ಆರಂಭಿಸಿತ್ತು. ಸ್ವಲ್ಪ ಸಮಯ ಚಲಿಸಿದ ರೈಲಿನ ಸ್ಲೀಪರ್ ಕೋಚ್ (S4)ನ ಕಪ್ಲಿಂಗ್ ಕಳಚಿಕೊಂಡಿದ್ದು, ಬೋಗಿಗಳು ಸಂಪರ್ಕ ಕಡಿದುಕೊಂಡಿವೆ. ರೈಲು ಇಬ್ಭಾಗವಾದಾಗ ಭಾರೀ ದುರಂತ ಸಂಭವಿಸಬಹುದೆಂದು ಪ್ರಯಾಣಿಕರು ಆತಂಕಕೊಂಡಿದ್ದರು. ಸದ್ಯ, ಯಾವುದೇ ಗಂಭೀರ ಪರಿಣಾಮಗಳು ಸಂಭವಿಸಿಲ್ಲ.
ದೆಹಲಿಯಿಂದ ಹೊರಟಿದ್ದ ರೈಲು ಮೂರು ಗಂಟೆಗಳಿಗಿಂತ ಹೆಚ್ಚು ತಡವಾಗಿ ಚಲಿಸುತ್ತಿತ್ತು. ಸೋಮವಾರ ರಾತ್ರಿ 9:30ರ ಸುಮಾರಿಗೆ ಡಿಡಿಯು ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ ಒಂದಕ್ಕೆ ಬಂದು, ಅಲ್ಲಿಂದ ಹೊರಟಿತ್ತು. ಜಂಕ್ಷನ್‌ನಿಂದ ಆರು ಕಿಲೋಮೀಟರ್ ಚಲಿಸಿದ್ದ ರೈಲು, ಎರಡು ಭಾಗಗಳಾಗಿ ಬೇರ್ಪಟ್ಟಿದೆ. ಪ್ರಯಾಣಿಕರು ಆಘಾತಕ್ಕೊಳಗಾಗಿದ್ದರು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
“ರೈಲು ಬೇರ್ಪಟ್ಟ ಕೂಡಲೇ ರೈಲ್ವೇ ಸಿಬ್ಬಂದಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾದರು. ಬೇರ್ಪಟ್ಟ ರೈಲಿನ ಭಾಗಗಳನ್ನು ಡಿಡಿಯು ಜಂಕ್ಷನ್‌ನ 7 ಮತ್ತು 8ನೇ ಪ್ಲಾಟ್‌ಫಾರ್ಮ್‌ಗಳಿಗೆ ಮರಳಿ ತಂದರು. ರೈಲನ್ನು ಮತ್ತೆ ಜೋಡಿಸಿ, ಅಗತ್ಯ ತಪಾಸಣೆ ಮತ್ತು ರಿಪೇರಿ ಕೆಲಸಗಳನ್ನು ಮುಗಿಸಿದ ಬಳಿಕ, ರಾತ್ರಿ 1:00 ಗಂಟೆಗೆ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು” ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ಜೋಡಣೆ ವೈಫಲ್ಯದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.