ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಹಮಾಸ್ ಸಂಘಟನೆಯನ್ನು ನಿರ್ಮೂಲನೆಗೊಳಿಸಲು ಇಸ್ರೇಲ್ ಹವಣಿಸುತ್ತಿದೆ. ಶಾಂತಿ ಒಪ್ಪಂದದ ಸೋಗಿನಲ್ಲಿ ಗಾಝಾವನ್ನು ಪ್ಯಾಲೆಸ್ತೀನಿಯರಿಂದ ಕಿತ್ತುಕೊಳ್ಳಲು ಅಮೆರಿಕ ಕೂಡ ಇಸ್ರೇಲ್‌ಗೆ ಸಹಾಯ ಮಾಡುತ್ತಿದೆ. ಈ ನಡುವೆ, ಹಮಾಸ್ ಸಂಘಟನೆಯಲ್ಲಿ ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಂತೆ ಭಾರತದ ಮೇಲೆ ಇಸ್ರೇಲ್ ಒತ್ತಡ ಹೇರುತ್ತಿದೆ.
ಇತ್ತೀಚೆಗೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ‘ಕಾಶ್ಮೀರ ಸಾಲಿಡಾರಿಟಿ ಡೇ’ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಮಾಸ್‌ನ ಹಲವು ನಾಯಕರು ಭಾಗವಹಿಸಿದ್ದರು. ಹಮಾಸ್ ನಾಯಕರು ಮೊದಲ ಬಾರಿಗೆ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹ್ಮದ್ ಸಂಘಟನೆಗಳ ಜೊತೆ ಪಿಒಕೆಗೆ ಬಂದಿದ್ದರು. ಇದನ್ನೇ ದಾಳವಾಗಿ ಮಾಡಿಕೊಂಡಿರುವ ಇಸ್ರೇಲ್, ಭಾರತದ ಮೇಲೆ ಒತ್ತಡ ಹೇರುವುದನ್ನು ಮತ್ತೆ ಆರಂಭಿಸಿದೆ.
ಇಸ್ರೇಲ್‌ನ ರಾಜತಂತ್ರಿಕರು ಭಾರತೀಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಹಮಾಸ್ ಸಂಘಟನೆಯನ್ನುಯ ‘ಭಯೋತ್ಪಾದಕ ಸಂಘನೆ’ ಎಂದು ಘೋಷಿಸುವಂತೆ ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ.
ಗಾಜಾ ಮೇಲೆ ಇಸ್ರೇಲ್ ಕಳೆದ 2 ವರ್ಷಗಳಿಂದ ದಾಳಿ ನಡೆಸುತ್ತಲೇ ಇದೆ. ಈವರೆಗೆ ಸುಮಾರು 52,000ಕ್ಕೂ ಹೆಚ್ಚು ಮಂದಿಯನ್ನು ಕೊಂದಿದೆ. ಆದಾಗ್ಯೂ, 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯನ್ನು ಮಾತ್ರವೇ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಖಂಡಿಸಿತ್ತು. ಇಸ್ರೇಲ್ ಪರವಾಗಿ ಮಾತನಾಡಿತ್ತು. ಆದರೂ, ಹಮಾಸ್ ಸಂಘಟನೆಯನ್ನು ಭಯೋತ್ಪಾದಕವೆಂದು ಘೋಷಿಸಿಲ್ಲ. ಸಂಘಟನೆ ಮೇಲೆ ನಿರ್ಬಂಧ, ನಿಷೇಧದಂತಹ ಕ್ರಮ ಕೈಗೊಂಡಿಲ್ಲ.
ಈಗಾಗಲೇ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ಹಮಾಸ್ ಸಂಘಟನೆಗೆ ಮೇಲೆ ನಿರ್ಬಂಧ ಹೇರಿವೆ. ಅಂತೆಯೇ, ಭಾರತ ಕೂಡ ನಿಷೇಧ ಹೇರಬೇಕೆಂದು ಇಸ್ರೇಲ್ ಒತ್ತಾಯಿಸುತ್ತಿದೆ.
ಈ ಹಿಂದೆ, ಮುಂಬೈನಲ್ಲಿ ದಾಳಿ ನಡೆಸಿದ್ದ ಪಾಕಿಸ್ತಾನದ ಎಲ್‌ಇಟಿ ಸಂಘಟನೆಯನ್ನು 2023ರಲ್ಲಿ ಇಸ್ರೇಲ್ ನಿಷೇಧಿಸಿತ್ತು. ಅಂತೆಯೇ, ಭಾರತ ಕೂಡ ಹಮಾಸ್‌ಅನ್ನು ನಿಷೇಧಿಸುತ್ತದೆ ಎಂದು ಭಾರತದಲ್ಲಿದ್ದ ಇಸ್ರೇಲ್ ರಾಯಭಾರಿ ನವೋರ್ ಗಿಲನ್ ಹೇಳಿದ್ದರು.