ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ದಿನದಿಂದ ದಿನಕ್ಕೆ ಮಂದಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಹಲವು ವರ್ಷಗಳಿಂದ ರಸ್ತೆ ಹಾಳಾಗಿ ಜನ ಕಷ್ಟವನ್ನು ಅನುಭವಿಸುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ.
ಇಂದ್ರಾಳಿ ರೈಲ್ವೆ ಮೇಲ್ಸ್ತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 10ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಎಂಜಿನಿಯರ್ಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಈ ಹಿಂದೆ ಸೂಚನೆ ನೀಡಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಹೀಗಾಗಿ ಸಾರ್ವಜನಿಕರು ಮತ್ತೊಮ್ಮೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡುರವರು ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿಯ ರೈಲು ಸೇತುವೆ ಕಾಮಗಾರಿಗೆ ಚಾಲನೆ ಪಡೆದು ಹಲವು ವರ್ಷಗಳು ಕಳೆದಿವೆ. ಇದುವರೆಗೂ ಸೇತುವೆ ನಿರ್ಮಾಣವಾಗಿಲ್ಲ.

ಎರಡು ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ 167 ಗೆ ಆರತಿ ಎತ್ತಿ 150 ಮೀಟರ್ ಹೊಂಡ ಗುಂಡಿಯ ರಸ್ತೆಯಲ್ಲಿ ಉರುಳು ಸೇವೆ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದೆ ಅದರ ತಂತರವೂ ಸಾರ್ವಜನಿಕ ಸಂಘ ಸಂಸ್ಥೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಆಡಳಿತ ವ್ಯವಸ್ಥೆಗಳು ಕಿವಿಯಿದ್ದು ಕಿವುಡರಾಗಿವೆ. ಅದೇ ರಸ್ತೆಯಲ್ಲಿ ಹಾದುಹೋಗುವ ಮಂತ್ರಿ ಮಹೋದಯರು, ಅಧಿಕಾರಿ ಮಹಾಶಯರು ವಸ್ತು ಸ್ಥಿತಿಯನ್ನು ಕಂಡರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ವಿಪರ್ಯಾಸ ಎನಿಸಿಕೊಂಡಿದೆ. ಹಾಗಾಗಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇತುವೆ ಲೋಕಾರ್ಪಣೆಗೊಳಿಸುವಂತೆ ಸರಕಾರವನ್ನು ಆಗ್ರಹಿಸಿ ಮಾ.7, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಇಂದ್ರಾಳಿಯ ನಿರ್ಮಾಣ ಹಂತದಲ್ಲಿರುವ ಸೇತುವೆ ಬಳಿ ಪ್ರತಿಭಟನೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
