ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಮಂಗಳವಾರ ದುಬೈನಲ್ಲಿ ನಡೆಯಲಿದೆ. ದುಬೈನ ಕ್ರೀಡಾಂಗಣದಲ್ಲಿ ಭಾರತ ತಂಡ ಈಗಾಗಲೇ 3 ಪಂದ್ಯಗಳನ್ನು ಆಡಿದ್ದು, ಸೆಮಿಫೈನಲ್ ಕೂಡ ಅಲ್ಲಿಯೇ ನಡೆಯುತ್ತಿದೆ. ಹೀಗಾಗಿ, ಭಾರತ ತಂಡಕ್ಕೆ ಹೆಚ್ಚು ಅನುಕೂಲ ಆಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ‘ಭಾರತ ತಂಡಕ್ಕೆ ಅನುಕೂಲ ಆಗುತ್ತದೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ’ ಎಂದಿದ್ದಾರೆ.
ಚಾಂಪಿಯನ್ಸ್ ಟೂರ್ನಿಯಲ್ಲಿ ಭಾರತ ತಂಡವು ಈವರೆಗೆ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯಗಳು ದುಬೈನ ಕ್ರೀಡಾಂಗಣದಲ್ಲಿಯೇ ನಡೆದಿವೆ. ಮೂರರಲ್ಲೂ ಗೆದ್ದಿರುವ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡ ಕೂಡ ಮೂರು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇನ್ನೆರಡು ಪಂದ್ಯಗಳಲ್ಲಿ ಸೋಲು-ಗೆಲುವು ಕಾಣುವ ಪರಿಸ್ಥಿತಿ ಇರಲಿಲ್ಲ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು, ಮತ್ತೊಂದು ಪಂದ್ಯ ಅರ್ಧಕ್ಕೆ ಮುಗಿದುಹೋಯಿತು. ಪರಿಣಾಮ, ಎರಡೂ ಪಂದ್ಯಗಳಿಂದ ತಲಾ ಒಂದು ಅಂಕ ಪಡೆದ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದೆ.
ಉಭಯ ತಂಡಗಳ ನಡುವೆ ದುಬೈನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಪಂದ್ಯ ಆರಂಭವಾಗಲಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲುಂಡಿತ್ತು. ಈಗ, ಆಸ್ಟ್ರೇಲಿಯಾವನ್ನು ಸೋಲಿಸಿ, ಫೈನಲ್‌ಗೆ ಲಗ್ಗೆ ಇಡಲು ಭಾರತ ತಂಡ ಎದುರು ನೋಡುತ್ತಿದೆ.
ದುಬೈ ಪಿಚ್‌ನಲ್ಲಿ ಆಡುತ್ತಿರುವುದು ಭಾರತಕ್ಕೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಮಾತನಾಡಿರುವ ಸ್ಮಿತ್, “ದುಬೈನಲ್ಲಿ ಭಾರತಕ್ಕೆ ಅನುಕೂಲವಾಗುವ ಬಗ್ಗೆ ನಮಗೆ ಅನುಮಾನ, ಗೊಂದಲಗಳಿಲ್ಲ. ನಾವು ಉತ್ತಮ ಪ್ರದರ್ಶನ ನೀಡುತ್ತೇವೆಂದು ಭಾವಿಸಿದ್ದೇವೆ” ಎಂದಿದ್ದಾರೆ.
“ಭಾರತ ತಂಡ ಆ ಪಿಚ್‌ನಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದಿದೆ. ಪಿಚ್ ಬಗ್ಗೆ ತಂಡಕ್ಕೆ ಚೆನ್ನಾಗಿ ತಿಳಿದಿರುತ್ತದೆ. ನಾನು ಕೂಡ ಮೈದಾನ ಸಿಬ್ಬಂದಿಗಳ ಜೊತೆ ಮಾತನಾಡಿದ್ದೇನೆ. ಪಂದ್ಯವು ಪ್ರಬಲ ಪೈಪೋಟಿಯೊಂದಿಗೆ ನಡೆಯುತ್ತದೆಂದು ಭಾವಿಸಿದ್ದೇನೆ. ಭಾರತ ತಂಡಕ್ಕೆ ಅನುಕೂಲವಾಗುವ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಸ್ಮಿತ್ ಹೇಳಿದ್ದಾರೆ.