- ಉಚಿತ ಅಕ್ಕಿ ನೀಡದ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
- ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬಿಜೆಪಿಯ ದ್ವೇಷ ರಾಜಕೀಯ
ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನೀಡಬೇಕಿದ್ದ ಉಚಿತ ಅಕ್ಕಿ ವಿತರಣೆಯನ್ನು ತಡೆ ಹಿಡಿದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸದಸ್ಯರು ಇಂದು ವಿನೂತನ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ರಸ್ತೆಯಲ್ಲೇ ಅಡುಗೆ ಮಾಡಿ, ಮೋದಿ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರು.
ಬಳಿಕ ಮೋದಿ ಸರ್ಕಾರದ ದ್ವೇಷ ರಾಜಕಾರಣದ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕರು, ಅನ್ನ ಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಅಕ್ಕಿ ನೀಡದೆ ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿರುವುದು ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಯನ್ನು ಎತ್ತಿ ತೋರುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರ ಇದೆ ಎಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ, ಬಡವರ ಬಗ್ಗೆ ಕಾಳಜಿ ವಹಿಸದೆ ಬಡವರ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ವಿತರಿಸದೆ ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ?:ತಾಕತ್ತಿದ್ರೆ ಒಕ್ಕೂಟ ವ್ಯವಸ್ಥೆಯಿಂದ ತೆಗೆದು ಹಾಕಿ: ಬಿಜೆಪಿಗೆ ಸವಾಲು ಹಾಕಿದ ಶಾಸಕ ಶಿವಲಿಂಗೇಗೌಡ
ಕರ್ನಾಟಕ ರಾಜ್ಯದ ಬಿಜೆಪಿ ಸಂಸತ್ ಸದಸ್ಯರು ನಿಷ್ಕ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಡವರ ಪರ ಮಾತನಾಡದ ಇವರು, ಸಂಸದರಾಗಿರಲು ಅರ್ಹರೇ ಎಂದು ಪ್ರತಿಭಟನಾ ನಿರತರು ಪ್ರಶ್ನಿಸಿದರು. ರಾಜ್ಯದ ಪಾಲನ್ನು ಪಡೆಯಲು ಹಿಂದೇಟು ಹಾಕುವ ಇವರಿಗೆ, ಅದನ್ನು ಪ್ರಶ್ನಿಸುವ ಧಮ್ಮು, ತಾಕತ್ತು ಇಲ್ಲವೇ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬಿಜೆಪಿ ಸೇಡು ಪ್ರದರ್ಶಿಸಿದೆ. ಇದಕ್ಕಾಗಿ ಇಬ್ಬಂದಿ ನೀತಿ ಅನುಸರಿಸಿ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.