ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವರದೇನಹಳ್ಳಿ ಜಯಣ್ಣ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಾಪಂ ಇಓ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀನಿವಾಸಮೂರ್ತಿ ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಹಿಂದುಳಿದ ವರ್ಗ(ಅ) ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ವರದೇನಹಳ್ಳಿ ಸದಸ್ಯ ಜಯಣ್ಣ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ಜಯಣ್ಣ ಮಾತನಾಡಿ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಒಕ್ಕೊರಲಿನ ಅಭಿಪ್ರಾಯ ಪಡೆದು ಮಾದರಿ ಗ್ರಾಮ ಪಂಚಾಯಿತಿ ಹೆಗ್ಗಳಿಕೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮೀಣ ಭಾಗದಲ್ಲಿ ಅವಶ್ಯ ರಸ್ತೆ, ನೀರು, ಬೀದಿ ದೀಪ ಒದಗಿಸಿ ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷ ಪ್ರೇಮಾ, ಸದಸ್ಯರಾದ ರಮೇಶ್, ಯತೀಶ್, ದೇವರಾಜ್, ಲಕ್ಷ್ಮೀದೇವಿ, ಶ್ರೀನಿವಾಸಮೂರ್ತಿ, ಲೀಲಾ, ಮುಮ್ತಾಜ್ ಬೇಗಂ, ಅನುಸೂಯಮ್ಮ, ಮುದ್ದಯ್ಯ, ಶಿವನಂಜಪ್ಪ, ದೊಡ್ಡಿರಮ್ಮ, ಕವಿತಾ, ಯತೀಶ್ ಕುಮಾರ್, ಗಾಯತ್ರಮ್ಮ, ಭದ್ರಯ್ಯ, ದಿನೇಶ್, ಪ್ರೇಮಲತಾ, ಮಂಗಳ, ಪಿಡಿಓ ರವಿ ಇತರರು ಇದ್ದರು.