ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 5 ರಿಂದ 23 ರವರೆಗೆ ಜರುಗಲಿದೆ. ಮಾರ್ಚ್ 5 ರಂದು ಧ್ವಜಾರೋಹಣ, 9 ರಂದು ರಥೋತ್ಸವ, 14 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಧಿವತ್ತಾಗಿ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
ಮಾರ್ಚ್ 5 ರ ಸಂಜೆ ನಡೆಯುವ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. 18 ದಿನಗಳ ಕಾಲ ನಿರಂತರ ನಡೆಯುವ ಈ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಸಾಕ್ಷಿಯಾಗಲಿದ್ದಾರೆ. ಮಾರ್ಚ್ 9 ರಥೋತ್ಸವ ಮಧ್ಯಾಹ್ನ 1.45 ಕ್ಕೆ ಜರುಗಲಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಲಿದ್ದು ಬಿರು ಬಿಸಿಲಿನ ನಡುವೆ ಪಾನಕ, ಫಲಾಹಾರ ಸಂಘ ಸಂಸ್ಥೆಗಳು ನೀಡಲಿದೆ. ನಿರಂತರ ದಾಸೋಹ ಇಡೀ ದಿನ ನಡೆಸಲು ಸಮಿತಿ ವ್ಯವಸ್ಥೆ ಮಾಡಿದೆ.

ಮಾರ್ಚ್ 14 ರ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ಕೂಡಾ ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ಅಂದು ರಾತ್ರಿ ಮೂರ್ತಿ ದಾಸೋಹ ವ್ಯವಸ್ಥೆ ವಿಶೇಷವಾಗಿ ನಡೆಸಲಾಗುವುದು. ಈ ನಡುವೆ ಮಾರ್ಚ್ 11 ರಂದು ನಾಟಕರತ್ನ ಡಾ.ಗುಬ್ಬಿ ವೀರಣ್ಣ ಅವರ ಕುಟುಂಬದವರಿಂದ ಪ್ರತಿ ವರ್ಷದಂತೆ ವಿಚಿತ್ರ ಮಂಟಪ ಉತ್ಸವ ಸೇವೆ ನಡೆಯಲಿದೆ.
ನಿತ್ಯ ಬಸವ ವಾಹನ ಉತ್ಸವ ನಡೆಯುವ ಈ ಜಾತ್ರೆಯು ಮಾರ್ಚ್ 20 ರಂದು ತೆಪ್ಪೋತ್ಸವ ಮೂಲಕ ಅಂತಿಮ ಘಟ್ಟ ತಲುಪಲಿದೆ. ಮಾರ್ಚ್ 23 ರಂದು ಚೆನ್ನಶೆಟ್ಟಿಹಳ್ಳಿ ಗದ್ದುಗೆಗೆ ಸ್ವಾಮಿಯ ಉತ್ಸವ ಅದ್ದೂರಿಯಾಗಿ ತಲುಪಿ ನಂತರ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಮರಳಿ ಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.