ನದಿಯ ಜೊತೆಗೆ ಜನರ ಬದುಕನ್ನು ನಾಶ ಮಾಡಲು ಹೊರಟ ಮರಳುಗಳ್ಳರ ಹೆಡೆಮುರಿ ಕಟ್ಟಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ನಗರದಲ್ಲಿಂದು ಕೊಟ್ಟಾರಿಕುದ್ರು, ಗಟ್ಟಿಕುದ್ರು ದ್ವೀಪಗಳ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯೆದುರು ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಆಗ್ನೆಸ್ ಜಂಕ್ಷನ್‌ನಿಂದ ಮೆರವಣಿಗೆ ಸಾಗಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, “ಕೊಟ್ಟಾರಿಕುದ್ರು, ಗಟ್ಟಿಕುದ್ರು ದ್ವೀಪಗಳಲ್ಲಿ ಯಾವುದೇ ತರದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದರಿಂದ ಉಭಯ ದ್ವೀಪಗಳು ಕೊಚ್ಚಿಹೋಗುವ ಭೀತಿಗೆ ಗುರಿಯಾಗಿವೆ. ಸುಮಾರು 40ರಷ್ಟು ಕುಟುಂಬಗಳು ಹಲವು ತಲೆಮಾರುಗಳಿಂದ ಇಲ್ಲೇ ವಾಸವಿದ್ದಾರೆ. ಪರಿಸರದ ಹಿತ ದೃಷ್ಟಿಯಿಂದ ಅತಿ ಸೂಕ್ಷ್ಮವಾಗಿರುವ ಇಂತಹ ದ್ಚೀಪಗಳನ್ನು ರಕ್ಷಿಸಲು ತಕ್ಷಣದಿಂದಲೇ ಕ್ರಮ ವಹಿಸಬೇಕಾಗಿದೆ. ಆದರೆ ಇಲ್ಲಿನ ಬಲಾಢ್ಯ ಮರಳುಕಳ್ಳರು ನದಿಯ ಜೊತೆಗೆ ಜನತೆಯ ಬದುಕನ್ನು ಕೂಡ ನಾಶ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಂಪೂರ್ಣ ಮಾಹಿತಿಯಿದ್ದರೂ ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳೂ ಆಗಿರುವ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಮಾತನಾಡಿ, “ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳು ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಆದರೂ ಇಲ್ಲಿ ಕಳೆದ ಹಲವು ವರ್ಷಗಳಿಂದ ಪೊಲೀಸ್ ಹಾಗೂ ವಿವಿಧ ಇಲಾಖೆಗಳು, ರಾಜಕೀಯ ಹಿತಾಸಕ್ತಿಗಳ ಬೆಂಬಲದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಕೌಟ್ಸ್ ಎಂಬ ನಾಮ ಫಲಕವನ್ನು ಕೂಡ ಕೊಟ್ಟಾರಿಕುದ್ರುನಲ್ಲಿ ಸ್ಥಾಪಿಸಿರುತ್ತಾರೆ. ಆದರೆ ಇಲ್ಲಿನ ಮರಳು ಕಳ್ಳರು ಆ ನಾಮಫಲಕವನ್ನೇ ಕಿತ್ತೊಗೆದು ಅಕ್ರಮ ಮರಳುಗಾರಿಕೆಯನ್ನು ನಡೆಸುವುದಲ್ಲದೆ, ವಿರೋಧ ವ್ಯಕ್ತಪಡಿಸುವ ಸ್ಥಳೀಯರಿಗೆ ಜೀವ ಬೆದರಿಕೆ ಒಡ್ಡುವ ಮೂಲಕ ಕುದ್ರುವಿನಿಂದಲೇ ಒದ್ದೋಡಿಸುವ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ” ಎಂದು ಹೇಳಿದರು.

ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್, ಹೋರಾಟ ಸಮಿತಿಯ ಅಧ್ಯಕ್ಷ ಓಸ್ವಾಲ್ಡ್ ಫುರ್ತಾಡೋ, ಕ್ಯಾಥೊಲಿಕ್ ಸಭಾದ ಉಪಾಧ್ಯಕ್ಷ ಸ್ಟೀವನ್ ರೋಡ್ರಿಗಸ್, ಜಿಲ್ಲಾ ಕಾರ್ಮಿಕ ಮುಖಂಡ ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಯುವಜನ ನಾಯಕ ರಿಜ್ವಾನ್ ಹರೇಕಳ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೋದಿನಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ನಾಯಕ ಫ್ಲೇವಿ ಕ್ರಾಸ್ತಾ ಅತ್ತಾವರ, ಸ್ಟ್ಯಾನ್ಲಿ ಡಿಕುನ್ನಾ, ಸಾಮಾಜಿಕ ಚಿಂತಕ ನೆಲ್ಸನ್ ರೋಚ್, ಹೋರಾಟ ಸಮಿತಿ ನಾಯಕಿ ಸುನೀತಾ ಡಿಸೋಜ, ಇತಾಲಿಸ್, ಡೇವಿಡ್ ಡಿಸೋಜ, ಮೇಜಿ ಡಿಸೋಜ, ಆಸ್ಕರ್ ಡಿಸೋಜ, ಕಿಶೋರ್ ಡಿಸೋಜ, ಬ್ರೂಸ್ಲಿ ಗ್ಲಾಡ್ಸನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ದಕ್ಷಿಣ ಕನ್ನಡ | ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ
ಬಳಿಕ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗವೊಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕಾಗಿ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
