ಹಾಲಿವುಡ್‌ನ ಪ್ರತಿಷ್ಠಿತ 97ನೇ ಆಸ್ಕರ್ ಪ್ರಶಸ್ತಿಗಳನ್ನು ಇತ್ತೀಚಿಗೆ ಘೋಷಣೆ ಮಾಡಲಾಯಿತು. ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಿಧ ಸಿನಿಮಾಗಳ ಒಟ್ಟು 23 ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಆದರೆ ಈ ಬಾರಿ ಗಮನ ಸೆಳೆದಿದ್ದು ಐದು ಪ್ರಶಸ್ತಿಗಳನ್ನು ಬಾಚಿಕೊಂಡ ‘ಅನೋರಾ’ ಸಿನಿಮಾ. ಲೈಂಗಿಕ ಕಾರ್ಯಕರ್ತೆಯೊಬ್ಬಳ ಸಿನಿಮಾದ ಅನೋರಾ ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನದ ಚಿತ್ರ ಕೂಡ. ಈ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ಸಂಕಲನ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
ಈ ಚಿತ್ರವನ್ನು ಸೀನ್ ಬೇಕರ್ ನಿರ್ದೇಶಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಮೈಕಿ ಮ್ಯಾಡಿಸನ್, ಆಕೆಯ ಪ್ರಿಯತಮನಾಗಿ ಮಾರ್ಕ್ ಎಡೆಲ್ಜಿಯನ್ ಮತ್ತು ಯುರಾ ಬೊರಿಸೊವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಹಾಲಿವುಡ್‌ನ ಇತರ ಚಿತ್ರಗಳಿಗೆ ಹೋಲಿಸಿದರೆ ಅನೋರಾ ಚಿತ್ರ ಅತಿ ಕಡಿಮೆ ಹಣದಲ್ಲಿ ನಿರ್ಮಿಸಲಾಗಿದೆ. 60 ಲಕ್ಷ ಡಾಲರ್ (ಸುಮಾರು 52 ಕೋಟಿ ರೂ.) ಹಣದಲ್ಲಿ ತಯಾರಿಸಲಾಗಿರುವ ಈ ಚಿತ್ರ ವಿಶ್ವಾದ್ಯಂತ 358 ಕೋಟಿಗೂ ಹೆಚ್ಚು ಲಾಭವನ್ನು ತಂದುಕೊಟ್ಟಿದೆ. ಅನೋರಾವು ಬಿಡುಗಡೆಗೂ ಮುನ್ನವೆ ಕಾನ್ಸ್, ಬೆಫ್ತಾ, ಗೋಲ್ಡನ್ ಗ್ಲೋಬ್ ಸೇರಿ ವಿಶ್ವಾದ್ಯಂತ ಹಲವು ಚಿತ್ರೋತ್ಸವಗಳಲ್ಲಿ ಇಲ್ಲಿಯವರೆಗೆ 75 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಒಂದೇ ಸಿನಿಮಾ ಐದು ಆಸ್ಕರ್ ಪ್ರಶಸ್ತಿ ಪಡೆದ ಹೆಗ್ಗಳಿಗೆ ‘ಅನೋರಾ’ದ್ದು. ಚಿತ್ರ ನಿರ್ದೇಶಕ ಸೀನ್ ಬೇಕರ್ ಅವರು ಆಸ್ಕರ್ ಇತಿಹಾಸದಲ್ಲಿ ಒಂದೇ ಚಿತ್ರಕ್ಕೆ ವೈಯಕ್ತಿಕವಾಗಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಜಯಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ನಿರ್ದೇಶಕ ವಾಲ್ಟ್ ಡಿಸ್ನಿ 1954 ರಲ್ಲಿ 4 ಆಸ್ಕರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಅವರು ಪ್ರಶಸ್ತಿ ಪಡೆದ 4 ಚಿತ್ರಗಳು ವಿಭಿನ್ನ ಸಿನಿಮಾಗಳಾಗಿದ್ದವು.
ಅನೋರಾ ಸಿನಿಮಾ ಚಿತ್ರೀಕರಣದ ಬಗ್ಗೆ ಮಾತನಾಡುವುದಾದರೆ ಹಲವು ವೈಶಿಷ್ಟತೆಗಳನ್ನು ಈ ಚಿತ್ರ ಹೊಂದಿದೆ. ಬೇರೆ ಹಾಲಿವುಡ್ ಚಿತ್ರಗಳಿಗಿಂತ ‘ಅನೋರಾ’ ಭಿನ್ನವಾಗಿದೆ. ಇದು ಇಂಡಿಪೆಂಡೆಂಟ್ ಸಿನಿಮಾವಾಗಿದೆ. ಇಂಡಿಪೆಂಡೆಂಟ್ ಸಿನಿಮಾವೆಂದರೆ ಹಾಲಿವುಡ್‌ನ ಇತರ ಸಿನಿಮಾಗಳ ರೀತಿಯಲ್ಲಿ ಪ್ರತಿಷ್ಟಿತ ಸ್ಟುಡಿಯೋದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿಲ್ಲ. ಹೊರಾಂಗಣದ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ನಡೆಸಲಾಗಿದೆ. ಒಟ್ಟು 35 ದಿನಗಳಲ್ಲಿ ‘ಅನೋರಾ’ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರಮುಖವಾದ 25 ನಿಮಿಷಗಳ ಹೋಮ್ ಅಟ್ಯಾಕ್ ದೃಶ್ಯವನ್ನು ಚಿತ್ರೀಕರಿಸಲು ಹತ್ತು ದಿನಗಳು ಸಮಯ ತೆಗೆದುಕೊಳ್ಳಲಾಗಿದೆ. ಉಳಿದ 25 ದಿನಗಳಲ್ಲಿ ಚಿತ್ರದ 139 ನಿಮಿಷದ 114 ನಿಮಿಷದ ಸಿನಿಮಾವನ್ನು ಶೂಟಿಂಗ್ ನಡೆಸಲಾಗಿದೆ.
ಲೈಂಗಿಕ ಕಾರ್ಯಕರ್ತೆಯ ಕಥೆ
ಸಿನಿಮಾದ ತಿರುಳಿಗೆ ಬಂದರೆ ‘ಅನೋರಾ’ ಲೈಂಗಿಕ ಕಾರ್ಯಕರ್ತೆಯ ಪ್ರೇಮ ಕಥೆಯನ್ನು ಆಧರಿಸಿದ ಚಿತ್ರ. 1985ರಲ್ಲಿ ಪುಟ್ಟಣ ಕಣಗಾಲ್ ನಿರ್ದೇಶಿಸಿದ ‘ಮಸಣದ ಹೂ’ ಹಾಗೂ ಇತ್ತೀಚಿಗೆ 2022ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿಯ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ನೋಡಿರುತ್ತೀರ. ಇವೆರೆಡೂ ಸಿನಿಮಾಗಳು ಲೈಂಗಿಕ ಕಾರ್ಯಕರ್ತೆಯರಿಗೆ ಸಂಬಂಧಿಸಿದ ಚಿತ್ರಗಳಾಗಿದ್ದವು. ಭಾರತದ ವಿವಿಧ ಭಾಷೆಗಳಲ್ಲಿ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ದುಃಖದುಮ್ಮಾನಗಳ ಬಗ್ಗೆ ಹತ್ತಾರು ಸಿನಿಮಾಗಳು ತೆರೆಕಂಡಿವೆ. ಹಾಲಿವುಡ್‌ನಲ್ಲೂ ನಾವು ಹಲವು ಸಿನಿಮಾಗಳನ್ನು ನೋಡಬಹುದು. ‘ಅನೋರಾ’ವನ್ನು ಒಬ್ಬ ಲೈಂಗಿಕ ಕಾರ್ಯಕರ್ತೆಯ ಜೀವನದಲ್ಲಿ ಬರುವ ಏರುಪೇರುಗಳನ್ನು ಇಟ್ಟುಕೊಂಡು ನಿರ್ಮಿಸಲಾಗಿದೆ.
ರಷ್ಯಾ ಮೂಲದ 23 ವರ್ಷದ ‘ಅನೋರಾ’ ಎಂಬಾಕೆ ತನ್ನ ಜೀವನೋಪಾಯಕ್ಕಾಗಿ ನ್ಯೂಯಾರ್ಕ್‌ನ ಬ್ರಿಡ್ಜ್‌ಟನ್ ಪಟ್ಟಣದಲ್ಲಿ ಲೈಂಗಿಕ ಕಾರ್ಯಕರ್ತೆಯರ ವರ್ಗಕ್ಕೆ ಸೇರುವ ಸ್ಟ್ರಿಪ್ಪೀಸ್ ನರ್ತಕಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾಳೆ. ನಿತ್ಯ ಕೆಲಸ ಮುಗಿದ ನಂತರ ರೈಲ್ವೆ ನಿಲ್ದಾಣದ ಮನೆಯಲ್ಲಿ ವಾಸಿಸಬೇಕಾಗಿರುತ್ತದೆ. ಹೀಗೆ ಜೀವನ ನಡೆಸುತ್ತಿರುವಾಗ ರಷ್ಯಾದ ಶ್ರೀಮಂತರ ಮಗನಾದ ‘ವನ್ಯಾ’ ಎಂಬಾತ ವ್ಯಾಸಂಗ ಮಾಡುವ ಸಲುವಾಗಿ ಅಮೆರಿಕಕ್ಕೆ ಬಂದಿರುತ್ತಾನೆ. ಆಗಷ್ಟೆ ಪ್ರಾಯಕ್ಕೆ ಬಂದಿರುವ ಆತನಿಗೆ ಓಡಾಟ, ಖುಷಿ ಬೇಕಾಗಿದೆ. ಹಾಗಾಗಿ ವನ್ಯಾಗೆ ತನ್ನ ರಷ್ಯನ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಯಾರಾದರೂ ಬೇಕು. ಈ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ಉಸ್ತುವಾರಿ ನೋಡಿಕೊಳ್ಳುವನ ಮೂಲಕ ವನ್ಯಾ ಅನೋರಾಳನ್ನು ಭೇಟಿಯಾಗುತ್ತಾನೆ. ಆಕೆಯೊಂದಿಗೆ ಒಂದು ವಾರ ಕಳೆಯಲು 15 ಸಾವಿರ ಡಾಲರ್ ಹಣ ಪಾವತಿಸುತ್ತಾನೆ. ಇಬ್ಬರೂ ಖುಷಿ, ಸಂತಸ ಹಾಗೂ ಖಾಸಗಿ ಕ್ಷಣಗಳನ್ನು ಹಂಚಿಕೊಂಡು ಅನುಭವಿಸುತ್ತಾರೆ. ಆತ್ಮೀಯತೆ ಪ್ರೇಮಕ್ಕೆ ತಿರುಗಿ ವನ್ಯಾ ಅನೋರಾಳನ್ನು ಮದುವೆಯಾಗುವ ಪ್ರಸ್ತಾಪ ಮಾಡುತ್ತಾನೆ.
ಈ ಸುದ್ದಿ ಓದಿದ್ದೀರಾ? ನೆನಪು | ವಿಶಿಷ್ಟ ಮ್ಯಾನರಿಸಂಗಳ ಮರೆಯಲಾರದ ನಟ ಜೀನ್ ಹ್ಯಾಕ್‌ಮನ್
ರಷ್ಯಾದ ಶ್ರೀಮಂತ ಹುಡುಗ ವನ್ಯಾ ಅನೋರಾಳ ಜೀವನದಲ್ಲಿ ಮದುವೆ ವಿಷಯ ಪ್ರಸ್ತಾಪಿಸಿದಾಗ ಮತ್ತಷ್ಟು ತಿರುವುಗಳು ಉಂಟಾಗುತ್ತವೆ. ಸಣ್ಣ ವಯಸ್ಸಿನವರಾದ ಕಾರಣ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮದುವೆಯಾಗುತ್ತಾರೆ. ಮಗನ ವಿವಾಹದ ವಿಚಾರ ರಷ್ಯಾದಲ್ಲಿರುವ ವನ್ಯಾನ ಪೋಷಕರಿಗೆ ತಿಳಿಯುತ್ತದೆ. ವನ್ಯಾನ ಕುಟುಂಬವು ಲೈಂಗಿಕ ಕಾರ್ಯಕರ್ತೆಯನ್ನು ತಮ್ಮ ಸೊಸೆಯಾಗಿ ಸ್ವೀಕರಿಸಲು ಖಡಾಖಂಡಿತವಾಗಿ ನಿರಾಕರಿಸಿದಾಗ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಸಿನಿಮಾದ ಉಳಿದ ಅರ್ಧ ಭಾಗ ಮದುವೆ ನಿರಾಕರಣೆಯ ಅಂತ್ಯ ಹೇಗಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಅನೋರಾಳನ್ನು ವನ್ಯಾನ ಪೋಷಕರು ತನ್ನ ಮಗನಿಂದ ದೂರ ಹೋಗಲು ಮತ್ತಷ್ಟು ಕಾಡಿಸಿ ತೊಂದರೆ ನೀಡುತ್ತಾರೆ. ಲೈಂಗಿಕ ಕಿರುಕುಳ ನೀಡಲಾಗುತ್ತದೆ. ಅಂತಿಮವಾಗಿ ಕಾನೂನು ಪ್ರಕಾರ ಇಬ್ಬರನ್ನು ಬೇರ್ಪಡಿಸಲಾಗುತ್ತದೆ.
ಅನೋರಾ ಪಾತ್ರಕ್ಕೆ ಜೀವ ತುಂಬಿರುವ 25 ವರ್ಷದ ನಟಿ ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವನ್ಯಾ ಪಾತ್ರದಲ್ಲಿ ಮಾರ್ಕ್ ಎಡೆಲ್ಜಿಯನ್ ಕೂಡ ಉತ್ತಮವಾಗಿ ನಟಿಸಿದ್ದಾರೆ. ನಿರ್ದೇಶಕ ಸೀನ್ ಬೇಕರ್ ಅವರ ಚಿತ್ರದಲ್ಲಿ, ಅಮೆರಿಕನ್ ಹಾಗೂ ರಷ್ಯಾದ ಕಲಾವಿದರು ಅಭಿನಯಿಸಿದ್ದಾರೆ. ರಂಗಭೂಮಿಯ ನಟರು ಕೂಡ ಸಿನಿಮಾದಲ್ಲಿ ಪಾತ್ರಾಭಿನಯ ಮಾಡಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ‘ಅನೋರಾ’ದಲ್ಲಿ ನಿಜವಾದ ಲೈಂಗಿಕ ಕಾರ್ಯಕರ್ತರು ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಸೀನ್ ಬೇಕರ್ ಅವರು ಈ ಚಿತ್ರವನ್ನು ನಿರ್ದೇಶಿಸುವ ಹಿಂದಿನ ಉದ್ದೇಶ ಲೈಂಗಿಕ ಕಾರ್ಯಕರ್ತರ ವೃತ್ತಿಗೆ ಒಂದು ಮಟ್ಟದ ಘನತೆಯನ್ನು ಒದಗಿಸುವುದಾಗಿತ್ತು. ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಈ ಚಿತ್ರ ನಿರ್ದೇಶಕರು ತಮ್ಮ ಚಿತ್ರವನ್ನು ಲೈಂಗಿಕ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.
ಭಾರತದಲ್ಲಿ ಅನೋರಾ ಸಿನಿಮಾ ಬಿಡುಗಡೆಯಾಗಿದಿದ್ದರೂ ಒಟಿಟಿಗಳಲ್ಲಿ ಲಭ್ಯವಿದೆ. ಅಮೇಜಾನ್ ಪ್ರೈಮ್ ಹಾಗೂ ಜೀ5 ನ ಪೇಯ್ಡ್ ಆವೃತ್ತಿಯಲ್ಲಿ ಲಭ್ಯವಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 17ರಂದು ಬಿಡುಗಡೆಯಾಗಲಿದೆ.
Superb