ವೈಜ್ಞಾನಿಕ ಮತ್ತು ತಂತ್ರಜ್ಞಾನ ಯುಗ ಇಷ್ಟು ಮುಂದುವರೆದರೂ ಮೂಢನಂಬಿಕೆಗಳು ಹಾಗೂ ಅಂಧ ಆಚರಣೆಗಳು ಸಾಕಷ್ಟಿವೆ. ಪ್ರತಿಯೊಬ್ಬ ವ್ಯಕ್ತಿಯ ಜೀವನವು ವಿಜ್ಞಾನಮಯ. ಪ್ರತಿಯೊಂದು ಘಟನೆಯನ್ನೂ ವೈಜ್ಞಾನಿಕ ತಳಹದಿ ಮೇಲೆ ಪರಮರ್ಸಿಸಬೇಕು ಎಂದು ವಿದ್ಯಾವರ್ಧಕ ಸಂಸ್ಥೆ ಸಂಸ್ಥಾಪಕ ಎಸ್ ಕುಮಾರ್ ತಿಳಿಸಿದರು.
ವಿಜಯಪುರ ನಗರದ ಬರಟಗಿ ರಸ್ತೆಯಲ್ಲಿರುವ ಸರಸ್ವತಿ ಆಂಗ್ಲ ಮಾಧ್ಯಮ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಮಹೇಶ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ʼಮೂಢನಂಬಿಕೆಗಳು ಮತ್ತು ಪವಾಡ ರಹಸ್ಯ ಬಯಲುʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆ ಅಧ್ಯಕ್ಷೆ ಡಾ. ಎಚ್.ಟಿ. ಲತಾದೇವಿ ಮಾತನಾಡಿ, “ಮಾನವ ಇಂದು ಚಂದ್ರನ ಮೇಲೆ ಕಾಲಿಟ್ಟ, ಮಂಗಳನ ಅಂಗಳಕ್ಕೆ ಲಗ್ಗೆ ಹಾಕಿದ್ದಾನೆ. ಇಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಅನೇಕ ಮೂಢನಂಬಿಕೆಗಳನ್ನು ಪಾಲಿಸಲಾಗುತ್ತಿದೆ. ಎಲ್ಲಿವರೆಗೆ ಮೂಢ್ಯ ಬಿಟ್ಟು ಹೊರಗೆ ಬರಲು ಆಗುವುದಿಲ್ಲವೋ, ಅಲ್ಲಿವರೆಗೆ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ” ಎಂದರು.
ಅತ್ತಳಿಯ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಸ್.ಕಾಂಬಳೆ ಮಾತನಾಡಿ, “ಮೂಢನಂಬಿಕೆ ಮತ್ತು ಕಂದಾಚಾರಗಳು ನಮ್ಮ ಸಮಾಜವನ್ನು ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ. ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಈ ಸಮಸ್ಯೆಯ ಸಮಾನ ಬಲುಪಶುಗಳಾಗಿದ್ದಾರೆ. ಪ್ರತಿನಿತ್ಯ ಜರುಗುತ್ತಿರುವ ಘಟನೆಗಳಾದ ನೀರಿನಿಂದ ದೀಪ ಉರಿಸುವುದು, ಕುದಿಯುವ ಎಣ್ಣೆಯಲ್ಲಿ ಕೈ ಅದ್ದುವುದು, ಬೆಂಕಿಯಲ್ಲಿ ನಡೆಯುವುದು, ಮೈಗೆ ಬೆಂಕಿ ಹಚ್ಚಿಕೊಳ್ಳುವುದು ಮುಂತಾದ ಘಟನೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಬೇರೆಯೇ ಇರುತ್ತವೆ. ಅವುಗಳನ್ನು ಕಂಡುಕೊಳ್ಳಬೇಕಷ್ಟೇ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದನ್ನೂ ಓದಿ: ವಿಜಯಪುರ | ಪಾಳುಬಿದ್ದ ಸಂತೆ ಮಾರುಕಟ್ಟೆ; ಲಕ್ಷಾಂತರ ರೂಪಾಯಿ ವ್ಯರ್ಥ
ಶಾಲೆಯ ವಿಜ್ಞಾನ ಶಿಕ್ಷಕ ರವಿ ಪತಂಗೆ, ವಿದ್ಯಾರ್ಥಿಗಳಿಂದ ವಿವಿಧ ಮಾದರಿಗಳನ್ನು ತಯಾರಿಸಿ ಅವುಗಳ ವೈಜ್ಞಾನಿಕ ಉಪಯೋಗಗಳನ್ನು ತಿಳಿಸಿಕೊಟ್ಟರು. ಈ ವೇಳೆ ಹತ್ತಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿಎಸ್ ಕಾಂಬಳೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
