ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆ,ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ ” ದಲಿತ ಸಂಘರ್ಷ ಸಮಿತಿ ಚಳುವಳಿಯ ಒತ್ತಾಸೆಯಿಂದಾಗಿ 2013-14 ರಲ್ಲಿ ಸಿದ್ದರಾಮಯ್ಯನವರ ಸರ್ಕಾರವೇ ಜಾರಿಗೆ ತಂದ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು,ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುಕ್ಕಾಗಿ ಜಾರಿಗೆ ಬಂದ ಯೋಜನೆಯಾಗಿದೆ.
ಕರ್ನಾಟಕ ಮಾನವ ಅಭಿವೃದ್ಧಿ ವರದಿ – 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಸರಾಸರಿ ಅಭಿವೃದ್ಧಿಗಿಂತಲೂ ದಲಿತರು ಕಡಿಮೆ ಅಭಿವೃದ್ಧಿ ಹೊಂದಿರುವುದು ಕಂಡು ಬಂದಿದೆ. ಹೀಗಿರುವಾಗ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಡಿ ದಲಿತರಿಗೆ ಮೀಸಲಿಟ್ಟ ಹಣವನ್ನು, ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಬೇಕೇ ಹೊರತು ಎಲ್ಲರ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಿಗೆ ಬಳಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು “.

” 2023-24ನೇ ಸಾಲಿನಿಂದಲೂ ಸುಮಾರು ರೂ 25000 ಕೋಟಿಯನ್ನು ಗ್ಯಾರಂಟಿಗಳಿಗೂ, ರೂ 15000 ಕೋಟಿಯನ್ನು ಅನ್ಯ ಉದ್ದೇಶಕ್ಕೂ ಬಳಸಿ, ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದೆ. ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಕೂಡ ಮಾಡಿದೆ.ಸರ್ಕಾರ, ಮುಖ್ಯ ಮಂತ್ರಿಗಳು, ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಇತರ ಮಂತ್ರಿಗಳು ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಮತ್ತು ಖಂಡನೀಯ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂಬಂತೆ, ದಲಿತರ ಓಗ್ಗಟ್ಟಿನ ಓಟುಗಳಿಂದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವುದು ಅಸಮಾಧಾನವನ್ನು ಉಂಟು ಮಾಡಿದೆ. ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ, ಎಲ್ಲರಿಗೂ ಈ ಯೋಜನೆಯಿಂದ ಅನುಕೂಲವಾಗಿದೆ ಆದರೆ ಗ್ಯಾರಂಟಿಗಳ ಉದ್ದೇಶವೇ ಬೇರೆ ಅದಕ್ಕೆ ಎಸ್ಸಿಎಸ್ಪಿ, ಟಿಎಸ್ಪಿ ಹಣ ಬಳಕೆ ಮಾಡಬಾರದು ಎಂದು ಆಗ್ರಹಿಸಿದರು “.

ದಸಂಸ ಮುಖಂಡ ನಂಜುಂಡಸ್ವಾಮಿ ಮಾತನಾಡಿ ” ಗ್ಯಾರಂಟಿಗಳು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ,ಆರ್ಥಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದಿಲ್ಲ. ಆದ್ದರಿಂದ ಈಗಿನಿಂದಲ್ಲೇ ಗ್ಯಾರಂಟಿಗಳಿಗೆ ಬಳಸಿರುವ ಎಸ್ಸಿಎಸ್ಪಿ, ಟಿ ಎಸ್ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಹಿಂದಿರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವೀರಪ್ಪನ್ ಅಡಗುದಾಣಗಳಲ್ಲಿ ಒಂದಾದ ಪಾಲಾರ್ ಹಾಡಿಗೆ ಬೆಳಕು; ಬುಡಕಟ್ಟುಗಳ ಮೊಗದಲ್ಲಿ ಮಂದಹಾಸ
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ರಂಗಸ್ವಾಮಿ, ದೊರೆಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಕಾಡಹಳ್ಳಿ ನಾಗರಾಜು, ನಿಜಧ್ವನಿ ಗೋವಿಂದರಾಜು, ರಾಮ ಸಮುದ್ರ ಸುರೇಶ್, ತಾಲೂಕು ಸಂಚಾಲಕ ಅನಿಲ್ ಕುಮಾರ್ , ಮಂಜುನಾಥ್, ಜಿಲ್ಲಾ ಸಂಘಟನಾ ಸಂಚಾಲಕ ದೊರೆಸ್ವಾಮಿ, ಇದಾಯತ್ ಉಲ್ಲಾ ಷರೀಪ್ ಸೇರಿದಂತೆ ಹಲವರು ಇದ್ದರು.
