ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡದ 265 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯವರ ಆಕರ್ಷಕ ಅರ್ಧಶತಕದ ನೆರವಿನಿಂದ 48.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 267 ರನ್ ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದಿದ್ದ ಆಸೀಸ್ ತಂಡ, ನಾಯಕ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿಯವರ ಅರ್ಧಶತಕದ ನೆರವಿನಿಂದ 49.3 ಓವರ್‌ಗಳಲ್ಲಿ 264 ರನ್ ಗಳಿಸುವಷ್ಟರಲ್ಲಿ ಸ್ಪಿನ್ ದಾಳಿಗೆ ನಲುಗಿ ಆಲೌಟ್ ಆಗಿತ್ತು.
ಆಸ್ಟ್ರೇಲಿಯಾ ನೀಡಿದ್ದ ಗುರಿಯನ್ನು ಬೆನ್ನಟ್ಟಲು ಹೊರಟ ಟೀಮ್ ಇಂಡಿಯಾಗೆ ಆರಂಭದಲ್ಲೇ ಆರಂಭಿಕ ಆಟಗಾರರಾದ ಶುಭಮನ್ ಹಾಗೂ ನಾಯಕ ರೋಹಿತ್ ಶರ್ಮಾ ಬೇಗನೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಜೊತೆಯಾದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 91 ರನ್‌ಗಳ ಜೊತೆಯಾಟ ನಡೆಸಿದರು.
45 ರನ್ ಗಳಿಸಿದ್ದಾಗ ಶ್ರೇಯಸ್ ಅಯ್ಯರ್, ಝಾಂಪಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಕ್ರೀಸ್‌ಗೆ ಬಂದ ಅಕ್ಸರ್ ಪಟೇಲ್, 27 ರನ್ ಗಳಿಸಿ ಔಟಾದರು. 84 ರನ್ ಗಳಿಸಿ ಶತಕ ಬಾರಿಸಲು ಯತ್ನಿಸುತ್ತಿದ್ದ ಕೊಹ್ಲಿ, ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾದ್ದರಿಂದ ಕ್ಯಾಚಿತ್ತು ಔಟಾದರು.
ಕೊನೆಯಲ್ಲಿ ಜೊತೆಯಾಟ ನಡೆಸಿದ ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯಾ ಗೆಲುವಿನತ್ತ ಕೊಂಡೊಯ್ದರು. ಗೆಲುವಿಗೆ 6 ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯಾ, ಕ್ಯಾಚ್ ನೀಡಿ ಔಟಾದರು. ಔಟಾಗುವುದಕ್ಕೂ ಮುನ್ನ 24 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್‌ನ ನೆರವಿನಿಂದ 28 ರನ್ ಗಳಿಸಿದರು. ಸಮಾಧಾನ ಚಿತ್ತದಿಂದ ಬ್ಯಾಟಿಂಗ್ ನಡೆಸಿದ ಕೆ ಎಲ್ ರಾಹುಲ್, 42 ರನ್ ಗಳಿಸುವ ಮೂಲಕ ಔಟಾಗದೇ ಉಳಿದರು.
